ಶಿಕ್ಷಣ ಸೂಚ್ಯಂಕದಲ್ಲಿ 7ರಿಂದ 14ನೇ ಸ್ಥಾನಕ್ಕೆ ಕುಸಿದ ಮೈಸೂರು: ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ

ವರ್ಗಾವಣೆಗೆ ಅಧಿಕಾರಿ ಮತ್ತು ಸಿಬ್ಬಂದಿ ನಮಗೆ ಹತ್ತಿರದ ಕಾರ್ಯಕರ್ತರ ಜೊತೆಗೆ ಬರುತ್ತೀರಿ, ಇದು ಕೆಟ್ಟ ನಡವಳಿಕೆ. ಮತ್ತೆ ಇಂಥ ನಡವಳಿಕೆ ಪುನರಾವರ್ತನೆ ಆಗಬಾರದು. ಇದರಿಂದ ಕಾರ್ಯಕರ್ತರಿಗೂ ಕೆಟ್ಟ ಹೆಸರು ಬರುತ್ತದೆ.
CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಮೈಸೂರು: ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ 7ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆಡಿಪಿ ) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.

ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಏಳನೇ ಸ್ಥಾನದಿಂದ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದು ಇಲ್ಲಿನ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೇಗಿದೆ ಎಂಬುದನ್ನು ತೋರಿಸುತ್ತದೆ. ಮೈಸೂರು ಶಿಕ್ಷಣಕ್ಕೆ ಮೊದಲಿನಿಂದಲೂ ಅತ್ಯಂತ ಪ್ರಾಮುಖ್ಯತೆ ನೀಡಿದ್ದ ಸಂಸ್ಥಾನ. ಇಲ್ಲಿಯೇ ಶಿಕ್ಷಣ ಸೂಚ್ಯಂಕದಲ್ಲಿ ಕುಸಿದಿರುವುದು ಸರಿಯಲ್ಲ. ಈ ಪರಿಸ್ಥಿತಿ ಸುಧಾರಿಸಬೇಕು ಎಂದು ಹೇಳಿದರು.

ಜನರನ್ನು ಅವರ ಕೆಲಸಗಳಿಗಾಗಿ ಅನಗತ್ಯ ಅಲೆದಾಡಿಸುವುದನ್ನು ನಾನು ಸಹಿಸಲ್ಲ. ಇದು ಅಕ್ಷಮ್ಯ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜನ ಸೇವೆಯ ಪ್ರಮಾಣ ಮಾಡಿ ಹುದ್ದೆ ಸ್ವೀಕರಿಸಿದ್ದೀರಿ. ಜನರನ್ನು ಅಲೆದಾಡಿಸಬಾರದು. ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಬರುವವರು, ಅಧಿಕಾರಿಗಳು ಶಾಶ್ವತವಾಗಿ ಇರುವವರು ಎನ್ನುವ ಭಾವನೆ ಬಿಟ್ಟು ಕೆಲಸ ಮಾಡಬೇಕು. ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲೇ ಏಕೆ ಇರಬೇಕು. ತಾಲ್ಲೂಕುಗಳಲ್ಲಿ ನೆಲೆಸಿ ಜನರ ಸಮಸ್ಯೆ ಕೇಳಬೇಕು ಎನ್ನುವ ಸೂಚನೆ ನೀಡಿದ್ದೆ. ಇದನ್ನು ಪಾಲಿಸದ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ನೀಡಬೇಕೆಂದು ತಿಳಿಸಿದರು.

ವರ್ಗಾವಣೆಗೆ ಅಧಿಕಾರಿ ಮತ್ತು ಸಿಬ್ಬಂದಿ ನಮಗೆ ಹತ್ತಿರದ ಕಾರ್ಯಕರ್ತರ ಜೊತೆಗೆ ಬರುತ್ತೀರಿ, ಇದು ಕೆಟ್ಟ ನಡವಳಿಕೆ. ಮತ್ತೆ ಇಂಥ ನಡವಳಿಕೆ ಪುನರಾವರ್ತನೆ ಆಗಬಾರದು. ಇದರಿಂದ ಕಾರ್ಯಕರ್ತರಿಗೂ ಕೆಟ್ಟ ಹೆಸರು ಬರುತ್ತದೆ. ಸರ್ಕಾರಕ್ಕೂ ಕೆಟ್ಟ ಹೆಸರು ತರಲು ಮುಂದಾದರೆ ಸಹಿಸಲಾಗದು ಎಂದು ಎಚ್ಚರಿಸಿದರು.

CM Siddaramaiah
ಕಬ್ಬಿನ ಬೆಲೆ ಏರಿಕೆ ಮಾಡುವ ಸರ್ಕಾರದ ನಿರ್ಧಾರವನ್ನು ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಳ್ಳುತ್ತವೆ: ಸಿಎಂ ಸಿದ್ದರಾಮಯ್ಯ

ಮೈಸೂರು ಅಭಿವೃದ್ಧಿಯ ವೇಗ ಹೆಚ್ಚಾಗಬೇಕು. ನಿಗದಿತ ಅವಧಿಯ ಒಳಗೆ ಕೆಲಸಗಳು ಪೂರ್ಣಗೊಳ್ಳಬೇಕು ಎನ್ನುವ ಸೂಚನೆಯನ್ನು ಹಿಂದಿನ ಕೆಡಿಪಿ ಸಭೆಯಲ್ಲಿ ನೀಡಿದ್ದೆ. ಆದರೂ ಈ ಬಗ್ಗೆ ಸಮಾಧಾನ ಆಗುವ ಮಟ್ಟಿಗೆ ವೇಗ ಪಡೆದುಕೊಂಡಿಲ್ಲ. ಜಿಲ್ಲೆಯ ಅಭಿವೃದ್ಧಿ ಜೊತೆಗೆ ಮೈಸೂರು ಜನತೆಯ ಸಮಸ್ಯೆಗಳನ್ನು ಆಲಿಸುವ ಮತ್ತು ಪರಿಹಾರ ಒದಗಿಸುವ ಕೆಲಸವೂ ಆಗಬೇಕು ಎಂದರು.

ಮೈಸೂರಿನ ಜನತೆ ನನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾರೆ. ನಾನು ಬೆಂಗಳೂರಿನಲ್ಲಿ ಇಲ್ಲದಿದ್ದರೆ ರಾತ್ರಿವರೆಗೂ ನನಗಾಗಿ ಕಾಯುತ್ತಾ ಇರುತ್ತಾರೆ. ಇವರಲ್ಲಿ ವೈಯುಕ್ತಿಕ ಸಮಸ್ಯೆಗಾಗಿ ಬರುವವರು ಕಡಿಮೆ. ಕಂದಾಯ ಇಲಾಖೆಗಳ ಸಮಸ್ಯೆಗಳಿಗಾಗಿ ಬರುವವರೇ ಹೆಚ್ಚು. ಮೈಸೂರಿನಲ್ಲೇ ಅವರ ಕೆಲಸಗಳು ಆಗಿದ್ದರೆ, ಮೈಸೂರಿನ ಕಚೇರಿಗಳಲ್ಲೇ ಕುಳಿತು ಅಧಿಕಾರಿಗಳು ಜನರ ಅಹವಾಲು ಕೇಳಿದ್ದರೆ, ಕೇಳಿ ಬಗೆಹರಿಸಿದ್ದರೆ ಅವರು ಮೈಸೂರಿನಿಂದ ಬೆಂಗಳೂರಿನವರೆಗೂ ಹುಡುಕಿಕೊಂಡು ಬರುವ ಅಗತ್ಯ ಇರುತ್ತಿರಲಿಲ್ಲ. “ಜನರನ್ನು ಅಲೆದಾಡಿಸುವುದು ಅಕ್ಷಮ್ಯ. ಇದನ್ನು ನಾನು ಸಹಿಸಲ್ಲ ಎಂದು ಎಚ್ಚರಿಸಿದರು.

ಸಿಇಒ ಮತ್ತು ಇತರೆ ಅಧಿಕಾರಿಗಳು ಆಸ್ಪತ್ರೆ, ಶಾಲೆ, ಹಾಸ್ಟೆಲ್‌ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎನ್ನುವ ಹಿಂದೆ ನೀಡಿದ್ದ ಸೂಚನೆ ಪಾಲನೆ ಆಗುತ್ತಿಲ್ಲ. ಇನ್ಸ್‌ಪೆಕ್ಟರ್‌ಗಳು, ಪಿಡಿಒಗಳು, ವಿಎ ಗಳ ಮೇಲೆ ಈ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಕಚೇರಿಗಳಿಗೆ ಗೌಪ್ಯ ಭೇಟಿ ನೀಡಿದರೆ ಕೆಲಸ ಕದಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ. ಇಲ್ಲಿಯವರೆಗೂ ಯಾರ ವಿರುದ್ಧವೂ ದೂರು ಬಂದಿಲ್ಲ, ವರದಿ ಬಂದಿಲ್ಲ. ಹಾಸ್ಟೆಲ್‌ಗಳಲ್ಲಿ ಊಟದ ವ್ಯವಸ್ಥೆಯನ್ನು ನಿರಂತರವಾಗಿ ಪರಿಶೀಲನೆ ನಡೆಸಬೇಕು. ಜಿಲ್ಲೆಗೆ ಹೊಸದಾಗಿ ಡಿಡಿಪಿಐ ಬಂದಿದ್ದಾರೆ. ಈ ಅವಧಿಯಲ್ಲಿ ಉತ್ತಮ ಫಲಿತಾಂಶ ಬರಬೇಕು. ನಾನು ಗಮನಿಸುತ್ತಾ ಇರುತ್ತೇನೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಫಲಿತಾಂಶ ಉತ್ತಮವಾಗಿರಬೇಕು, ಇದಕ್ಕೆ ಏನು ಮಾಡಬೇಕು ಎನ್ನುವ ಬ್ಲೂಪ್ರಿಂಟ್‌ ಸಿದ್ದಪಡಿಸಿಕೊಳ್ಳಿ ಎಂದು ಸೂಚನೆ ನೀಡಿದರು.

ಇದೇ ವೇಳೆ ಐತಿಹಾಸಿಕ ದಸರಾ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com