

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ಹದಿಹರೆಯದ ವಯಸ್ಸಿನಲ್ಲಿ ತಿಳಿಯದೆಯೇ ಯುವಕ-ಯುವತಿಯೊಬ್ಬಳು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಬಂದು ಮದುವೆಯಾಗಿದ್ದರು. ಆದರೆ ಮನೆಗೆ ಬಂದ ಜೋಡಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಹೌದು... ಅದಕ್ಕೆ ಕಾರಣ ಸಂಬಂಧ. ಈ ಜೋಡಿ ವರಸೆಯಲ್ಲಿ ಅಣ್ಣಾ-ತಂಗಿ ಆಗಬೇಕು ಎಂದು ಪೋಷಕರು ಹೇಳಿದ್ದೂ ಈ ಮದುವೆಗೆ ಸುತಾರಾಂ ಒಪ್ಪಿವುದಿಲ್ಲ ಎಂದು ಪೋಷಕರು ಹಠ ಹಿಡಿದಿದ್ದರು.
ಗೋಪಲ್ಲಿ ಗ್ರಾಮದ 23 ವರ್ಷದ ನಿತಿನ್ ಹಾಗೂ 19 ವರ್ಷದ ಸುಕನ್ಯಾ ಪ್ರೀತಿಸಿ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ ಮನೆಗೆ ಬಂದ ಜೋಡಿಗೆ ಯುವಕನ ಮನೆಯವರು ನೀವಿಬ್ಬರು ಅಣ್ಣ-ತಂಗಿ ಆಗಬೇಕು. ಈ ಮದುವೆಯನ್ನು ನಾವು ಒಪ್ಪಲ್ಲ ಎಂದು ಹೇಳಿದ್ದಾರೆ. ಇನ್ನು ಯುವತಿ ಮನೆಯವರೂ ಸಹ ನಿಮ್ಮ ಮದುವೆಗೆ ನಾವು ಯಾರೂ ಕೂಡ ಒಪ್ಪಲ್ಲ, ಸಂಬಂಧಿಕರು ಬೈದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಆದರೆ ಯುವತಿ ನನಗೆ ಅದೇ ಹುಡುಗ ಬೇಕು. ಅವನಿಲ್ಲದೇ ನಾನು ಬದುಕಲ್ಲ ಎಂದು ಪಟ್ಟು ಹಿಡಿದ್ದಾಳೆ. ಇತ್ತ ಪೋಷಕರು ಸಹ ಸಹಮತ ವ್ಯಕ್ತಪಡಿಸದಿದ್ದಕ್ಕೆ ಮನನೊಂದ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
Advertisement