

ಬಾಗಲಕೋಟೆ: ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಘೋಷಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ರೈತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರು ಕಾರ್ಖಾನೆ ಮಾಲೀಕರು ಮಾತುಕತೆಗೆ ಬಾರದ ಕಾರಣ ಹಾಗೂ ತಮ್ಮ ಬೆಳೆಯನ್ನು ಗೋದಾಮಿಗೆ ಕೊಂಡೊಯ್ಯುತ್ತಿದ್ದ ರೈತರ ಟ್ರ್ಯಾಕ್ಟರ್ ಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ನನ್ನು ರಸ್ತೆ ಮಧ್ಯೆಯೇ ತಡೆದ ಕಬ್ಬು ಬೆಳೆಗಾರರು, ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿ ಟ್ರ್ಯಾಕ್ಟರ್ ನ್ನು ಉರುಳಿಸಿದ್ದರು. ಬಳಿಕ ಸಮೀರವಾಡೆ ಗೋದಾವರಿ ಕಾರ್ಖಾನೆಗೆ ಮುತ್ತಿಗೆ ಹಾಕಲು ಬೈಕ್, ವಾಹನಗಳಲ್ಲಿ ತೆರಳಿದ ರೈತರು ಅಲ್ಲಿದ್ದ ಕಬ್ಬಿನ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಾರ್ಖಾನೆಯ ಆವರಣದಲ್ಲಿ ನಿಲ್ಲಿಸಿದ್ದ ಕಬ್ಬು ತುಂಬಿದ್ದ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಗೆ ರೈತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬಿನ ಲೋಡ್ ಗಳು ರೈತರ ಆಕ್ರೋಶದ ಬೆಂಕಿಗೆ ಧಗ ಧಗನೆ ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ರೈತರು ಶಾಂತಿ ಕಾಪಾಡಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳದಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮನವಿ ಮಾಡಿದ್ದಾರೆ.
ಸರ್ಕಾರವು ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಕಾರ್ಖಾನೆಗಳಿಗೆ ಕಬ್ಬು ಪೂರೈಸಲು ಸಿದ್ಧರಿದ್ದ ಇತರ ರೈತರ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ. ಗುರುವಾರ ಮುಧೋಳ ತಾಲೂಕಿನಲ್ಲಿ ಬಂದ್‌ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸಮೀರವಾಡಿಯ ಕಡೆಗೆ ಮೆರವಣಿಗೆ ಆರಂಭಿಸಿದರು. ಎರಡೂ ಕಡೆಯ ರೈತರ ನಡುವೆ ವಾಗ್ವಾದ ನಡೆದ ನಂತರ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಒಂದು ವರ್ಗದ ರೈತರು ಕಬ್ಬು ಪೂರೈಸಲು ಸಿದ್ಧರಿದ್ದರೆ ಇತರರು ಅದನ್ನು ವಿರೋಧಿಸುತ್ತಿದ್ದಾರೆ.
ವಾಗ್ವಾದದ ನಂತರ ಕೆಲವು ರೈತರು ಮೊದಲು ಪರಸ್ಪರ ಕಲ್ಲು ತೂರಾಟ ನಡೆಸಿದರು. ನಂತರ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಟ್ರ್ಯಾಕ್ಟರ್ ಸುಟ್ಟುಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನಿಖರವಾದ ಸಂಖ್ಯೆಯ ಟ್ರ್ಯಾಕ್ಟರ್‌ಗಳು ಸುಟ್ಟುಹೋಗಿವೆ ಎಂಬ ದೃಢೀಕೃತ ವರದಿಗಳಿಲ್ಲದ ಕಾರಣ, ಕನಿಷ್ಠ ನೂರು ಟ್ರ್ಯಾಕ್ಟರ್‌ಗಳು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಲಾಗುತ್ತಿದೆ. ಅವುಗಳ ಬಳಿ ನಿಲ್ಲಿಸಿದ್ದ ಹಲವಾರು ಬೈಕ್ ಗಳು ಸಹ ಸುಟ್ಟುಹೋಗಿವೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದರು.
ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಕ್ಕಾಗಿ ಸಹ ರೈತರ ಮೇಲೆ ರೈತರು ಆಕ್ರೋಶಗೊಂಡಿದ್ದಾರೆ. ಈ ಘಟನೆಯಿಂದಾಗಿ ತಮ್ಮ ಸಂಪೂರ್ಣ ಬೆಳೆ ಸುಟ್ಟುಹೋಗಿ ಭಾರೀ ನಷ್ಟವಾಗಿದೆ ಎಂದು ರೈತರು ಆರೋಪಿಸಿದ್ದಾರೆ. ನಾವೂ ರೈತರು, ಇತರ ಕೆಲ ರೈತರಿಂದ ನಮಗೆ ನಷ್ಟವಾಗಿದೆ. ನಮ್ಮ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚುವುದರಲ್ಲಿ ಅರ್ಥವೇನು? ರೈತರು ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚುವ ಬದಲು ಕಾರ್ಖಾನೆಗಳ ಹೊರಗೆ ಪ್ರತಿಭಟನೆ ನಡೆಸಬೇಕಿತ್ತು. ಇದು ಒಳ್ಳೆಯದಲ್ಲ. ಈ ಭಾರಿ ನಷ್ಟವನ್ನು ಈಗ ಯಾರು ಸರಿದೂಗಿಸುತ್ತಾರೆ ಕಬ್ಬು ಬೆಳೆಗಾರರಲ್ಲಿ ಒಬ್ಬರಾದ ಶರ್ವಣಕುಮಾರ್ ಭದ್ರಶೆಟ್ಟಿ ಹೇಳಿದರು.
ಇದರ ನಡುವೆ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ಹಲವು ರೈತರು, ಸರ್ಕಾರವು ಟನ್‌ಗೆ 3500 ರೂ.ಗಳಿಗೆ ಒಪ್ಪದ ಕಾರಣ ಕಾರ್ಖಾನೆಗಳು ಮತ್ತು ಸರ್ಕಾರವೇ ಘಟನೆಗೆ ಕಾರಣ ಎಂದು ಆರೋಪಿಸಿದರು. ಬೆಂಕಿಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ನಂತರ ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
Advertisement