

ಬೆಳಗಾವಿ: ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕಳೆದ 2 ದಿನಗಳಲ್ಲಿ 28 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮೃಗಾಲಯದ ಎಸಿಫ್ ನಾಗರಾಜ್ ಬಾಳೆಹೊಸೂರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮೃಗಗಳಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್‌ನಿಂದ ಸಾವು ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ. ಆದರೆ, ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಒಟ್ಟು 38 ಕೃಷ್ಣಮೃಗಗಳಲ್ಲಿ ಇದುವರೆಗೆ 28 ಮೃಗಗಳು ಎರಡೇ ದಿನಗಳಲ್ಲಿ ಸಾವನ್ನಪ್ಪಿದ್ದು, ಮೊದಲ ದಿನ 20 ಕೃಷ್ಣಮೃಗಗಳು ಸಾವನ್ನಪ್ಪಿದ್ದರೆ, ಎರಡನೇ ದಿನ 8 ಕೃಷ್ಣಮೃಗಗಳು ಸಾವನ್ನಪ್ಪಿವೆ. ಅನುಮಾನಾಸ್ಪದವಾಗಿ ಮೃತಪಟ್ಟ ಕೃಷ್ಣಮೃಗಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮೃಗಗಳ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ಬೆಂಗಳೂರಿನ ಬನ್ನೇರುಘಟ್ಟ ಪ್ರಾಣಿಶಾಸ್ತ್ರ ಉದ್ಯಾನವನದ ಅಧಿಕಾರಿಗಳಿಗೆ ಮಾದರಿಯನ್ನು ಕಳುಹಿಸಿದ್ದೇವೆಂದು ಹೇಳಿದ್ದಾರೆ.
ತನಿಖೆಗೆ ಆದೇಶ
ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾವಿನ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸಾವಿನ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.
ಪ್ರಾಥಮಿಕ ವರದಿಗಳು ಈ ಜಿಂಕೆಗಳು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿವೆ ಎಂದು ಸೂಚಿಸುತ್ತವೆ ಮತ್ತು ಮೃಗಾಲಯದಲ್ಲಿನ ಯಾವುದೇ ಇತರ ಪ್ರಾಣಿಗಳಿಗೆ ಸೋಂಕು ತಗುಲದಂತೆ ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಾವುಗಳು ಕಲುಷಿತ ನೀರು ಮತ್ತು ಆಹಾರವನ್ನು ಸೇವಿಸುವುದರಿಂದ ಸಂಭವಿಸಿವೆಯೇ ಅಥವಾ ಬೆಕ್ಕುಗಳಂತಹ ಸಾಕು ಪ್ರಾಣಿಗಳಿಂದ ಈ ರೋಗ ಹರಡಿದೆಯೇ ಎಂಬುದನ್ನು ತನಿಖೆ ಮಾಡಲು ಮತ್ತು ಸೂಕ್ತ ಕ್ರಮ ಕೈಗೊಳ್ಳಲು ತಜ್ಞರ ಸಮಿತಿಯನ್ನು ರಚಿಸಬೇಕು.
ಮೃಗಾಲಯದಲ್ಲಿ ಪ್ರಾಣಿಗಳು ಈ ರೀತಿ ಸಾಯುತ್ತಿರುವುದು ಕಳವಳಕಾರಿ ವಿಷಯ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಸಾವನ್ನಪ್ಪಿದರೆ ನಿಯಮಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಮೃಗಾಲಯದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅವು ಸಾವನ್ನಪ್ಪಿವೆ ಎಂದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
Advertisement