

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಬಯೋ ರಿಫೈನರೀಸ್ ಲಿಮಿಟೆಡ್ ಬಳಿ ಗುರುವಾರ ಸಂಭವಿಸಿದ ಬೆಂಕಿ ಪ್ರಕರಣ ಸಂಬಂಧ ಉಂಟಾಗಿರುವ ಹಾನಿಗೆ ಸಾಧ್ಯವಿರುವ ಪರಿಹಾರ ನೀಡಲಾಗುವುದು ಸಚಿವ ಶಿವಾನಂದ ಪಾಟೀಲ್ ಶುಕ್ರವಾರ ಹೇಳಿದರು.
ದುರಂತದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸಚಿವರು ಮಾತನಾಡಿದರು.
ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಹಾನಿಯ ಪ್ರಮಾಣದ ಸಮೀಕ್ಷೆ ಆರಂಭಿಸಿದೆ. ಎಷ್ಟು ಪರಿಹಾರ ನೀಡಬೇಕೆಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಎಷ್ಟು ಸಾಧ್ಯವಿದೆಯೋ ಅಷ್ಟು ಪರಿಹಾರವನ್ನು ಸರಕಾರದಿಂದ ಇಲ್ಲವೇ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಂಸ್ಥೆಯಿಂದ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಘಟನೆಯನ್ನು ಖಂಡಿಸಿದ ಸಚಿವರು, ತಪ್ಪಿತಸ್ಥರ ವಿರುದ್ಧ ಅವರ ಸ್ಥಾನಮಾನವನ್ನು ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಳಿಕ ಕಬ್ಬು ಬೆಳೆಗಾರರ ಹಿತಾಸಕ್ತಿಗಳನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ 7.3 ಲಕ್ಷ ಹೆಕ್ಟೇರ್‌ಗಳಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ 5.67 ಲಕ್ಷ ಹೆಕ್ಟೇರ್‌ಗಳಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಕಬ್ಬು ಅರೆಯುವಿಕೆ ವಿಳಂಬವಾಗುವುದರಿಂದ ಸಕ್ಕರೆ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ, ತೂಕ ಕಡಿಮೆಯಾಗುತ್ತದೆ ಮತ್ತು ಮುಂದಿನ ಬೆಳೆ ಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಈ ನಡುವೆ ಘಟನೆ ಬಳಿಕ ಕಾರ್ಯಾಚರಣೆ ಆರಂಭಿಸಲು ಕಾರ್ಖಾನೆಗಳು ಹಿಂಜರಿಯುತ್ತಿದ್ದು, ಸಂಪೂರ್ಣ ರಕ್ಷಣೆ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ರಾಜ್ಯ ಸರ್ಕಾರ ಯಾವುದೇ ಕಾರ್ಖಾನೆಗಳ ಮಾಲೀಕರಿಗೆ ಮಣಿದಿಲ್ಲ. ಮಣಿದಿದ್ದರೆ ಹೆಚ್ಚಿನ ಬೆಲೆ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಕಬ್ಬಿನ ಉಪ ಉತ್ಪನ್ನಗಳಿಂದ ಕಾರ್ಖಾನೆಗಳು ಗಳಿಸುವ ಲಾಭದ ಬಗ್ಗೆ ಹಾಗೂ ಸರಕಾರಕ್ಕೆ ಬರುವ ತೆರಿಗೆ ಬಗ್ಗೆಯೂ ತಪ್ಪು ಮಾಹಿತಿ ನೀಡುವ ಪ್ರಯತ್ನ ಆಗಬಾರದು. ಸಕ್ಕರೆ ರಫ್ತು ಪ್ರಮಾಣ ಹಾಗೂ ರಾಜ್ಯಕ್ಕೆ ನಿಗದಿಪಡಿಸಿರುವ ಎಥನಾಲ್ ಉತ್ಪಾದನೆ ಮಿತಿಯನ್ನು ಕೇಂದ್ರ ಸರಕಾರ ಹೆಚ್ಚಳ ಮಾಡಬೇಕು. ವಾಣಿಜ್ಯ ಬಳಕೆಯ ಸಕ್ಕರೆ ಬೆಲೆಯನ್ನು ಹೆಚ್ಚಳ ಮಾಡಬೇಕೆಂಬುದು ರಾಜ್ಯದ ಬೇಡಿಕೆಯಾಗಿದೆ ಎಂದು ಹೇಳಿದರು.
Advertisement