

ಮಂಗಳೂರು: ಮಂಗಳೂರಿನ ಹೊರವಲಯದ ಪಣಂಬೂರು ಜಂಕ್ಷನ್ ಬಳಿ ಶನಿವಾರ ಎರಡು ಟ್ಯಾಂಕರ್‌ಗಳು, ಒಂದು ಆಟೋರಿಕ್ಷಾ ಮತ್ತು ಒಂದು ಎಸ್‌ಯುವಿ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪಣಂಬೂರು ಜಂಕ್ಷನ್‌ನಲ್ಲಿ ಹಸುವೊಂದು ಇದ್ದಕ್ಕಿದ್ದಂತೆ ರಸ್ತೆ ದಾಟಲು ಪ್ರಯತ್ನಿಸಿದಾಗ, ಮೂಲ್ಕಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ.
ಆ ಟ್ಯಾಂಕರ್ ಅನ್ನು ಹಿಂಬಾಲಿಸಿದ ಆಟೋರಿಕ್ಷಾ ಸಕಾಲದಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಅದರ ಹಿಂದೆ ಬರುತ್ತಿದ್ದ ಎಸ್‌ಯುವಿ ಕಾರು ಸಹ ಹಾಗೆಯೇ ನಿಂತಿತು. ಆದರೆ ಅತಿ ವೇಗದಲ್ಲಿ ಹಿಂಭಾಗದಿಂದ ಬರುತ್ತಿದ್ದ ಮತ್ತೊಂದು ಟ್ಯಾಂಕರ್ ಬ್ರೇಕ್ ಹಾಕಲು ವಿಫಲವಾಗಿ ನೇರವಾಗಿ ಎಸ್‌ಯುವಿ ಕಾರು ಹಾಗೂ ಆಟೋಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಎರಡು ಟ್ಯಾಂಕರ್‌ಗಳ ನಡುವೆ ಸಿಲುಕಿಕೊಂಡಿದ್ದ ಆಟೋರಿಕ್ಷಾ ತಕ್ಷಣವೇ ನಜ್ಜುಗುಜ್ಜಾಯಿತು ಎಂದು ಅವರು ಹೇಳಿದ್ದಾರೆ.
ಅಪಘಾತದಲ್ಲಿ ಆಟೋರಿಕ್ಷಾ ಚಾಲಕ ಮತ್ತು ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಸಮಯದಲ್ಲಿ ರಸ್ತೆಯ ಗೋಚರತೆ ಸ್ಪಷ್ಟವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಂಕರ್ ಗಳ ಚಾಲಕರು ಮತ್ತು ಎಸ್‌ಯುವಿ ಕಾರಿನ ಚಾಲಕ ಯಾವುದೇ ದೊಡ್ಡ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹಿಂಭಾಗದ ಟ್ಯಾಂಕರ್ ನಿಯಂತ್ರಣ ಕಳೆದುಕೊಳ್ಳಲು ಅತಿಯಾದ ವೇಗ ಅಥವಾ ಬ್ರೇಕ್ ಫೇಲ್ ಕಾರಣವೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
Advertisement