

ಬೆಳಗಾವಿ: ಬೆಳಗಾವಿಯ ಭೂತರಾಮನಹಟ್ಟಿಯಲ್ಲಿರು ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಮಾರಣಹೋಮ ಮುಂದುವರಿದಿದ್ದು, ಮೃಗಾಲಯದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನವೆಂಬರ್ 13ರಿಂದ ಆರಂಭವಾದ ಸಾವುಗಳ ಸರಪಳಿಯಲ್ಲಿ ಈಗಾಗಲೇ 30 ಕೃಷ್ಣಮೃಗಗಳು ಪ್ರಾಣ ಕಳೆದುಕೊಂಡಿದ್ದು, ಉಳಿದಿರುವ 8 ಕೃಷ್ಣಮೃಗಗಳಿಗೆ ಆರೈಕೆ ಮುಂದುವರೆದಿದೆ.
ತಜ್ಞ ಪಶುವೈದ್ಯರ ಸಲಹೆಯ ಮೇರೆಗೆ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಭಾನುವಾರ ಸಂಜೆ ಮತ್ಚು ಇಂದು ಎರಡು ಕೃಷ್ಣಮೃಗಗಳು ಸಾವನ್ನಪ್ಪಿದ್ದು, ಇದು ಆತಂಕದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ.
ಈ ಹಿಂದೆ, ದೊಡ್ಡದಲ್ಲಿ ಕೃಷ್ಣಮೃಗಗಳು ಸಾವನ್ನಪ್ಪಿದ ಬಳಿಕ ತಜ್ಞರ ಶಿಫಾರಸುಗಳ ಪ್ರಕಾರ ಅಗತ್ಯವಿರುವ ಎಲ್ಲಾ ಕ್ರಮಗಳು ಮತ್ತು ಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದರು.
ಆದಾಗ್ಯೂ, ಪರಿಸ್ಥಿತಿ ಹದಗೆಡುತ್ತಲೇ ಇತ್ತು, ಮೃಗಾಲಯದ ಪಶುವೈದ್ಯಕೀಯ ಸಿಬ್ಬಂದಿ ಮತ್ತು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಗದಗ ಮೃಗಾಲಯದಿಂದ 38 ಕೃಷ್ಣಮೃಗಗಳನ್ನು ಕರೆತರಲಾಗಿತ್ತು. ನಾಲ್ಕರಿಂದ ಆರು ವರ್ಷ ವಯಸ್ಸಿನ ಈ ಪ್ರಾಣಿಗಳಿಗೆ ಮೃಗಾಲಯದಲ್ಲಿ ಸಂರಕ್ಷಿಸಲಾಗುತ್ತಿತ್ತು.
ಸೋಂಕಿತ ಪ್ರಾಣಿಗಳನ್ನು ಮೊದಲೇ ಪತ್ತೆಹಚ್ಚಿ, ಹಿಂಡಿನಿಂದ ತಕ್ಷಣವೇ ಪ್ರತ್ಯೇಕಿಸಿದ್ದರೆ ಇಷ್ಟು ದೊಡ್ಡ ಪ್ರಮಾಣದ ಜೀವಹಾನಿಯನ್ನು ತಪ್ಪಿಸಬಹುದಿತ್ತು ಎಂದು ತಜ್ಞರು ಹೇಳಿದ್ದಾರೆ.
ಮೊದಲ ಎಂಟು ಕೃಷ್ಣಮೃಗಗಳ ಸಾವುಗಳ ನಂತರ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮಾದರಿಗಳನ್ನು ಸಂಗ್ರಹಿಸಿ ವಿವರವಾದ ವಿಶ್ಲೇಷಣೆಗಾಗಿ ಬನ್ನೇರುಘಟ್ಟ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ತಜ್ಞ ವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ಕೃಷ್ಣಮೃಗಗಳ ಸಾವಿಗೆ ಕಾರಣವೇನು ಎನ್ನುವುದು ಪತ್ತೆಯಾಗಿದ್ದು, ಗಳಲೆ ರೋಗ (ಬ್ಯಾಕ್ಟೀರಿಯಾ ಹಿಮೋರೇಜಿಕ್ ಸೇಫ್ಟಿಸಿಮೀಯಾ) ಎಂಬ ಮಾರಣಾಂತಿಕ ಕಾಯಿಲೆಗೆ ಕೃಷ್ಣ ಮೃಗಗಳ ಸರಣಿ ಸಾವಾಗಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಸಾವನ್ನಪ್ಪಿದ 25 ಕೃಷ್ಣಮೃಗಗಳಿಗೆ ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, 3 ಕೃಷ್ಣಮೃಗಳನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಡಾ.ಸುನೀಲ್ ಪವಾರ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ತಿಳಿದುಬಂದಿದೆ.
Advertisement