

ಬೆಂಗಳೂರು: ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, 14 ವಿದೇಶಿ ಪ್ರಜೆಗಳು ಸೇರಿದಂತೆ 19 ಜನರನ್ನು ಬಂಧಿಸಿದೆ. ಬಂಧಿತರಿಂದ ಸುಮಾರು 7.7 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ನಡೆದ ಸಂಘಟಿತ ದಾಳಿಯ ನಂತರ, 2.804 ಕೆಜಿ ನಿಷೇಧಿತ ಎಂಡಿಎಂಎ ಮಾದಕ ವಸ್ತು ಮತ್ತು 2.1 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ದಗುಂಟೆ ಪಾಳ್ಯದಲ್ಲಿ ನೈಜೇರಿಯಾದ ಮಹಿಳೆ ಬಂಧನ
ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ನಡೆಸಿದ ಮೊದಲ ಕಾರ್ಯಾಚರಣೆಯಲ್ಲಿ, ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾದ ಆರೋಪದ ಮೇಲೆ ನೈಜೀರಿಯಾದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯಿಂದ ಸುಮಾರು ರೂ. 1.52 ಕೋಟಿ ರೂ. ಮೌಲ್ಯದ 760 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಅಪರಾಧಕ್ಕೆ ಬಳಸಲಾದ ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಮಹದೇವಪುರದಲ್ಲಿ ಐವರ ಸೆರೆ: ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ಐವರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 60 ಲಕ್ಷ ರೂ. ಮೌಲ್ಯದ 600 ಗ್ರಾಂ ಹೈಡ್ರೋ ಗಾಂಜಾ ಮತ್ತು ಐದು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಬಿ. ನಾರಾಯಣಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವರ್ತೂರಿನಲ್ಲಿ ಮೂರನೇ ಕಾರ್ಯಾಚರಣೆ: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಮಹಿಳೆಯೊಬ್ಬಳು ಡ್ರಗ್ಸ್ ಮಾರಾಟದಲ್ಲಿ ತೊಡಗಿರುವ ಬಗ್ಗೆ ಬಂದ ಮಾಹಿತಿ ದೊರೆತ ನಂತರ ಕೀನ್ಯಾ ಮೂಲದ ಮಹಿಳಾ ಪೆಡ್ಲರ್‌ನನ್ನು ಬಂಧಿಸಲಾಗಿದೆ. ಆರೋಪಿಯಿಂದ ರೂ. 4.08 ಕೋಟಿ ರೂ. ಮೌಲ್ಯದ 2.044 ಕೆ.ಜಿ. ಎಂ.ಡಿ.ಎಂ.ಎ ಕ್ರಿಸ್ಟಲ್ ಜೊತೆಗೆ ಮೊಬೈಲ್ ಫೋನ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಕಳೆದ ವರ್ಷ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದು, ಕಾಮನಹಳ್ಳಿಯಲ್ಲಿ ಹೇರ್ ಡ್ರೆಸರ್ ಆಗಿ ಕೆಲಸ ಮಾಡುತ್ತಿದ್ದರು. ತಲೆಮರೆಸಿಕೊಂಡಿರುವ ನೈಜೀರಿಯಾ ಮತ್ತು ಟಾಂಜೇನಿಯಾದ ಇಬ್ಬರು ಆರೋಪಿಗಳಿಂದ ಡ್ರಗ್ಸ್ ಖರೀದಿಸಿ, ಪರಿಚಿತ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಅಂಚೆ ಕಚೇರಿಯಲ್ಲಿ ಡ್ರಗ್ಸ್ ಪತ್ತೆ: ಖಚಿತ ಮಾಹಿತಿಯ ಮೇರೆಗೆ ನಡೆಸಿದ ನಾಲ್ಕನೇ ಕಾರ್ಯಾಚರಣೆಯಲ್ಲಿ, ಕೆ.ಜಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ವಿದೇಶಿ ಅಂಚೆ ಕಚೇರಿಯಲ್ಲಿ ಅನುಮಾನಾಸ್ಪದ ಪಾರ್ಸೆಲ್‌ಗಳಿಂದ ಸುಮಾರು 1.5 ಕೋಟಿ ರೂ. ಮೌಲ್ಯದ 1.5 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಥೈಲ್ಯಾಂಡ್ ಮತ್ತು ಫ್ರಾನ್ಸ್‌ನಿಂದ ಬಿಸ್ಕೆಟ್ ಮತ್ತು ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಕಳುಹಿಸುತ್ತಿದ್ದರು.ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ 11 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಪರಿಶೀಲನೆ ಮತ್ತು ಮುಂದಿನ ಕಾನೂನು ಕ್ರಮಕ್ಕಾಗಿ ಅವರನ್ನು FRRO (ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ) ಮುಂದೆ ಹಾಜರುಪಡಿಸಲಾಗಿದೆ ಎಂದು ಅದು ಹೇಳಿದೆ.
Advertisement