

ಮೈಸೂರು: ಕಳೆದ ತಿಂಗಳು ಮುಳ್ಳೂರು ಗ್ರಾಮ ಪಂಚಾಯತ್‌ನಲ್ಲಿ ರೈತನೊಬ್ಬನನ್ನು ಕೊಂದು ಹಲವಾರು ಇತರ ದಾಳಿಗಳಿಗೆ ಕಾರಣವಾಗಿದ್ದ ಹುಲಿಯನ್ನು ತೀವ್ರ ಶೋಧ ಮತ್ತು ಕಾರ್ಯಾಚರಣೆ ಬಳಿಕ ಅರಣ್ಯಾಧಿಕಾರಿಗಳು ಮಂಗಳವಾರ ಮುಂಜಾನೆ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರೈತನನ್ನು ಬಲಿ ಪಡೆದಿದ್ದ ಹುಲಿಯು ನಂತರ ಎರಡು ದನಗಳನ್ನೂ ಬೇಟೆಯಾಡಿತ್ತು. ಇದರ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ಬಳಿಕ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆಯು ಒಟ್ಟು 11 ಹುಲಿ ಹಾಗೂ ಅದರ ಮರಿಗಳನ್ನು ಸೆರೆಹಿಡಿದಿತ್ತು. ಆದರೆ, ರೈತನ್ನು ಬಲಿ ಪಡೆದಿದ್ದ ಹುಲಿ ಮಾತ್ರ ಸೆರೆ ಸಿಕ್ಕಿರಲಿಲ್ಲ. ಬಳಿಕ ಹುಲಿ ಸೆರೆ ಸಂಘಟಿತ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ಕಾರ್ಯಾಚರಣೆಯ ನೇತೃತ್ವವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಪ್ರಭಾಕರ್ ಎಸ್, ವನ್ಯಜೀವಿ ಪಶುವೈದ್ಯ ಡಾ. ವಾಸಿಮ್, ರಾಜೇಶ್ ಎಸ್ ಡಿ, ಆರ್‌ಎಫ್‌ಒ, ರಾಜೀವ್ ಮತ್ತು ಅರಣ್ಯ ಇಲಾಖೆಯ ಡ್ರೋನ್ ಕಣ್ಗಾವಲು ತಂಡ ವಹಿಸಿತ್ತು. ಅಧಿಕಾರಿಗಳಾದ ದೀಪಕ್, ಡಿಆರ್‌ಎಫ್‌ಒ ಮತ್ತು ಹಲವಾರು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತರಬೇತಿ ಪಡೆದ ಆನೆಗಳಾದ ಭೀಮ, ಮಹೇಂದ್ರ, ಸುಗ್ರೀವ ಮತ್ತು ಪ್ರಶಾಂತವನ್ನೂ ಕಾರ್ಯಾಚರಣೆ ನಿಯೋಜಿಸಲಾಗಿತ್ತು. ಇದಲ್ಲದೆ, ಕಾರ್ಯಾಚರಣೆಯಲ್ಲಿ ಬಳಸಲಾದ ಡ್ರೋಣ್, ಹುಲಿ ಪತ್ತೆ ಮಾಡಲು ನೆರವಾಗಿದೆ.
ಹಲವಾರು ಗಂಟೆಗಳ ಎಚ್ಚರಿಕೆಯ ಮೇಲ್ವಿಚಾರಣೆಯ ನಂತರ, ಸ್ಥಳೀಯರಿಗೆ ಅಥವಾ ಪ್ರಾಣಿಗೆ ಹೆಚ್ಚಿನ ಹಾನಿಯಾಗದಂತೆ ಹುಲಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಯಿತು.
ಹುಲಿಯ ವಯಸ್ಸು, ಹೆಜ್ಜೆ ಗುರುತು, ನಡವಳಿಕೆಯ ಮಾದರಿಯ ಆಧಾರದ ಮೇಲೆ ದಾಳಿ ನಡೆಸಿದ ಹುಲಿ ಇದೇ ಎಂಬುದು ಬಲವಾಗಿ ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement