

ಬೀದರ್: ಸೌದಿ ಅರೇಬಿಯಾದ ಮದೀನಾ ಬಳಿ ತೈಲ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ 45 ಮಂದಿ ಭಾರತೀಯರ ಪೈಕಿ ಬೀದರ್ ನಗರದ ಮಹಿಳೆಯೊಬ್ಬರೂ ಕೂಡ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಸೌದಿ ಬಸ್ ಅಪಘಾತದಲ್ಲಿ ಬೀದರ್ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆಂದು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಧೃಡಪಡಿಸಿದ್ದಾರೆ.
ಮೃತ ಮಹಿಳೆಯನ್ನು ಬೀದರ್ ನಗರದ ಮೈಲೂರು ಬಡಾವಣೆಯ ರೆಹಮತ್ ಬಿ (80) ಎಂದು ಗುರ್ತಿಸಲಾಗಿದೆ.
ಕೇಂದ್ರ ಸರಕಾರ ಎಲ್ಲಾ ಮೃತದೇಹಗಳನ್ನು ಒಂದೇ ಬಾರಿಗೆ ಭಾರತಕ್ಕೆ ತರಲು ವ್ಯವಸ್ಥೆ ಮಾಡಿದೆ. ಭಾರತಕ್ಕೆ ಬಂದಾಗ ಮೃತದೇಹಗಳ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರೆಹಮತ್ ಅವರು ಹೈದರಾಬಾದ್ ಮೂಲಕ ಸೌದಿ ಅರೇಬಿಯಾಕ್ಕೆ ಹೋಗಿದ್ದರು, ಇದೀಗ ಅಧಿಕಾರಿಗಳು ರೆಹಮತ್ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ.
ನಿನ್ನೆಯಷ್ಟೇ ರಾಜ್ಯ ಸರ್ಕಾರ ಹುಬ್ಬಳ್ಳಿ ಮೂಲದ ಅಬ್ದುಲ್ ಘನಿ ಎಂಬವರು ಇದೇ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು.
ದುರಂತ ಘಟನೆ ಕುರಿತು ಹೇಳಿಕೆ ನೀಡಿದ್ದ ತೆಲಂಗಾಣದ ಅಧಿಕಾರಿಗಳು, 45 ಮಂದಿ ಯಾತ್ರಿಕರು ಸಾವನ್ನಪ್ಪಿದ್ದಾರೆಂದು ಹೇಳಿದ್ದರು. ಆದರೆ, ಕೇಂದ್ರ ಸರ್ಕಾರ ಅಪಘಾತದಲ್ಲಿ 42 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿದೆ.
Advertisement