

ಬೆಂಗಳೂರು: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿ ಜಾರಿ ಮಾಡಲು ರಾಜ್ಯ ಸರ್ಕಾರ ಸಿದ್ದವಿದ್ದು, ಮೀಸಲಾತಿ ಪ್ರಮಾಣವನ್ನು ಶೇ 70-75 ಕ್ಕೆ ಹೆಚ್ಚಿಸುವ ಬಗ್ಗೆ ಆಸಕ್ತಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ "ಎಲ್.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ನನಗೆ ಕೊನೆಯ ಉಸಿರು ಇರುವವರೆಗೂ, ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ ಎಂದು ಹೇಳಿದರು.
ಅಹಿಂದ ಸಮುದಾಯದವರು ತಮ್ಮ ವಿರೋಧಿಗಳಾದ ಬಿಜೆಪಿ - ಆರ್.ಎಸ್.ಎಸ್ - ಎಬಿವಿಪಿ ಸೇರುತ್ತಾರಲ್ಲಾ ಇವರಿಗೆ ಏನು ಹೇಳೋದು? ಬಿಜೆಪಿ - ಆರ್.ಎಸ್.ಎಸ್ ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಸೇರುತ್ತಾರಲ್ಲಾ ಇದಕ್ಕೇನು ಮಾಡೋದು? ದೇವರು, ಧರ್ಮದ ಹೆಸರಲ್ಲಿ ಸಾಯುತ್ತಾ ಇರೋರೆಲ್ಲಾ ನಮ್ಮ ಹಿಂದುಳಿದವರೇ. ಸ್ವಾರ್ಥಕ್ಕಾಗಿ ಬಿಜೆಪಿ - ಆರ್.ಎಸ್.ಎಸ್ ಸೇರಿ ಇವರೇ ಮೂಲ ಆರ್.ಎಸ್.ಎಸ್ ನವರಿಗಿಂತ, ಹೆಡಗೆವಾರ್ ರೀತಿ ಮಾತಾಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತಾಗಿತ್ತು. ನಮ್ಮಲ್ಲಿ ಶಿಕ್ಷಣ ಪ್ರಮಾಣ ಶೇ. 68 ರಷ್ಟಿದ್ದರೂ ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಅನುಕೂಲ ಮಾಡಿಕೊಂಡವರು ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಹಿಂದುಳಿದವರು ಇನ್ನೂ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಮೇಲು ಜಾತಿಯ ಬಡವರನ್ನೂ ಬಹುವಚನದಿಂದ ಕರೆಯುವುದು, ಕೆಳ ಜಾತಿಯ ಶ್ರೀಮಂತರನ್ನು ಏಕವಚನದಲ್ಲಿ ಕರೆಯುವುದೇ ಗುಲಾಮಿ ಮನಸ್ಥಿತಿಯ ಸಂಕೇತ ಎಂದರು.
ನಾನು ಹಣಕಾಸು ಮಂತ್ರಿಯಾದಾಗ, "ಈ ಸಿದ್ದರಾಮಯ್ಯಂಗೆ ನೂರು ಕುರಿ ಎಣಿಸೋಕೆ ಬರಲ್ಲ ಬಜೆಟ್ ಮಂಡಿಸ್ತಾರಾ" ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು. ಇದನ್ನು ನಾನು ಸವಾಲಾಗಿ ಸ್ವೀಕರಿಸಿದೆ. 16 ಬಜೆಟ್ ಮಂಡಿಸಿದೆ. 17ನೇ ಬಜೆಟನ್ನೂ ಮಂಡಿಸುತ್ತೇನೆ. ನನಗೆ ಅವಕಾಶ ಸಿಕ್ಕಿದ್ದರಿಂದ ನಾನು ಇಷ್ಟೆಲ್ಲಾ ಮಾಡಲು ಸಾಧ್ಯವಾಯಿತು. ಅವಕಾಶ ಸಿಗದಿದ್ದರೆ ನನ್ನಿಂದ ಇದನ್ನು ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ದಮನಿತ ಜಾತಿಗಳಿಗೆ ಅವಕಾಶ ಮುಖ್ಯ ಎಂದರು.
ರಾಹುಲ್ ಗಾಂಧಿಯವರಿಗೆ ಸೈದ್ಧಾಂತಿಕ ಬದ್ಧತೆ ಇದ್ದಿದ್ದರಿಂದಲೇ ದೇಶಾದ್ಯಂತ ಜಾತಿ ಗಣತಿಗೆ ಒತ್ತಡ ಹೇರಿದರು. ಮೊನ್ನೆ ನನಗೂ "ಏನಾಯ್ತು ನಿಮ್ಮ ಗಣತಿ" ಎಂದು ಕೇಳಿದರು. ರಾಹುಲ್ ಗಾಂಧಿಯವರಿಗೆ ಸ್ಪಷ್ಟತೆ ಇರುವುದರಿಂದಲೇ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿ ಗಣತಿ ನಡೆಸುವಂತೆ ಮಾಡಿದ್ದಾರೆ. ನಮ್ಮ ಸರ್ಕಾರ ಕೂಡ ಈ ಗಣತಿಯನ್ನು ಒಪ್ಪಿಕೊಂಡು ಜಾರಿಮಾಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
Advertisement