

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ ಬೆಂಗಳೂರಿನ ಜೆಪಿ ನಗರದ ಬ್ಯಾಂಕ್ ಶಾಖೆಯಿಂದ ವಾಹನದಲ್ಲಿ ಹಣವನ್ನು ಸಾಗಿಸುತ್ತಿದ್ದಾಗ ಅಶೋಕ ಪಿಲ್ಲರ್ ಬಳಿ ಎಟಿಎಂ ನಗದು ವ್ಯಾನ್ ತಡೆದ ದುಷ್ಕರ್ಮಿಗಳು ಸುಮಾರು 7 ಕೋಟಿ ರೂಪಾಯಿಗಳೊಂದಿಗೆ ಪರಾರಿಯಾಗಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ನಡೆದ ಹಗಲು ದರೋಡೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತ ಸರ್ಕಾರದ ಸ್ಟಿಕ್ಕರ್ ಹೊತ್ತ ಕಾರಿನಲ್ಲಿ ಬಂದ ಗುಂಪೊಂದು ದಾಖಲೆಗಳನ್ನು ಪರಿಶೀಲಿಸಲು ಬಯಸುವುದಾಗಿ ಹೇಳಿ ನಗದು ವಾಹನವನ್ನು ತಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಂತರ ಶಂಕಿತರು ವ್ಯಾನ್‌ನ ಸಿಬ್ಬಂದಿಯನ್ನು ಬಲವಂತವಾಗಿ ನಗದು ಜೊತೆಗೆ ತಮ್ಮ ಕಾರಿನೊಳಗೆ ಕೂರಿಸಿಕೊಂಡರು. ನಂತರ ಡೈರಿ ಸರ್ಕಲ್ ಬಳಿ ಸಿಬ್ಬಂದಿಯನ್ನು ಇಳಿಸಿ ಸುಮಾರು ಏಳು ಕೋಟಿ ರೂ.ಗಳಷ್ಟು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಘಟನೆ ನಂತರ ತನಿಖೆ ಕೈಗೊಂಡ ಪೊಲೀಸರು ಹಣ ಸಾಗಿಸಿದ ಮಾರ್ಗವನ್ನು ಪತ್ತೆಹಚ್ಚಲು ಮತ್ತು ಭಾಗಿಯಾಗಿರುವವರನ್ನು ಗುರುತಿಸಲು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಡಾ. ಜಿ ಪರಮೇಶರ್ ಅವರು, ಡಿಜಿ-ಐಜಿಪಿ ಸಲೀಂ ಅವರಿಗೆ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದಾರೆ. ಘಟನೆ ಸಂಭವಿಸಬಾರದಿತ್ತು. ಯಾರು ಭಾಗಿಯಾಗಿದ್ದಾರೆ? ಸಾಗಿಸಲಾಗುತ್ತಿರುವ ಹಣದ ಬಗ್ಗೆ ಅವರಿಗೆ ಮಾಹಿತಿ ಕೊಟ್ಟಿದ್ದು ಯಾರೂ? ನಮಗೆ ಈಗ ಮಾಹಿತಿ ಇಲ್ಲ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತನಿಖೆ ನಡೆಸುತ್ತಿದ್ದೇವೆ. ನಮಗೆ ಕೆಲವು ಸುಳಿವುಗಳು ಸಿಕ್ಕಿವೆ. ನಾವು ಅವರನ್ನು ಬಂಧಿಸುತ್ತೇವೆ. ಸದ್ಯಕ್ಕೆ ನಾನೇನು ಹಂಚಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ಇಂತಹ ಘಟನೆ ಬೆಂಗಳೂರಿನಲ್ಲಿ ಎಂದಿಗೂ ನಡೆದಿಲ್ಲ ಎಂದು ಸಚಿವರು ಹೇಳಿದರು.
ಇಂದು ಮಧ್ಯಾಹ್ನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಡೀ ನಗರದಲ್ಲಿ ನಕಬಂದಿ ಇದೆ. ನಾವು ನಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು ವಿವಿಧ ತಂಡಗಳನ್ನು ರಚಿಸಿದ್ದೇವೆ. ನಮ್ಮ ತಂಡಗಳು ನಗರದಾದ್ಯಂತ ಹರಡಿಕೊಂಡಿವೆ. ನಮ್ಮ ತಂಡಗಳು ಭೌತಿಕವಾಗಿ ಸ್ಥಳದಲ್ಲಿವೆ. ಜೊತೆಗೆ ವಿವಿಧ ತಾಂತ್ರಿಕ ವಿಭಾಗಗಳ ಅಡಿಯಲ್ಲಿ ನಿಯಂತ್ರಣ ಕೊಠಡಿಯಲ್ಲಿವೆ. ನಾವು ಪ್ರಕರಣವನ್ನು ಆದಷ್ಟು ಬೇಗ ಪತ್ತೆಹಚ್ಚಲು ಪ್ರಯತ್ನಿಸುತ್ತೇವೆ. ಇಬ್ಬರು ಡಿಸಿಪಿಗಳು ಮತ್ತು ಜಂಟಿ ಆಯುಕ್ತರು ಪ್ರಕರಣದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದರು.
ಘಟನೆಯ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡ ಬಿಜೆಪಿ ನಾಯಕ ಆರ್. ಅಶೋಕ, ಲೂಟಿ 'ಬ್ರ್ಯಾಂಡ್ ಬೆಂಗಳೂರಿನ' ಭಾಗವಾಗಿದೆ ಎಂದು ಆರೋಪಿಸಿದರು. ಜಯನಗರದಲ್ಲಿ ಹಗಲು ಹೊತ್ತಿನಲ್ಲಿಯೂ ಲೂಟಿ ನಡೆಯುತ್ತಿದೆ. ಬ್ಯಾಂಕ್‌ಗಳಲ್ಲಿಯೂ ಜನರ ಹಣಕ್ಕೆ ರಕ್ಷಣೆ ಇಲ್ಲ. ವಿಧಾನಸೌಧದಲ್ಲಿಯೂ ಕಳ್ಳತನ ನಡೆದರೆ ಆಶ್ಚರ್ಯವೇನಿಲ್ಲ" ಎಂದು ಅವರು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರವನ್ನು ಅಪರಾಧಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು. ನಗರದ ಹೃದಯ ಭಾಗದಲ್ಲಿ ಹಗಲು ಹೊತ್ತಿನಲ್ಲಿ ನಡೆದ ದರೋಡೆ ಸ್ವಾಭಾವಿಕವಾಗಿಯೇ ಜನರಲ್ಲಿ ಭಯವನ್ನು ಸೃಷ್ಟಿಸಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಪರಾಧಿಗಳಿಗೆ ಕಾನೂನಿನ ಭಯವಿಲ್ಲ ಎಂಬುದು ಪದೇ ಪದೇ ಸಾಬೀತಾಗಿದೆ ಎಂದು ಅವರು ಪ್ರತಿಪಾದಿಸಿದರು.
Advertisement