

ಬೆಂಗಳೂರು: ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ದೇವಸ್ಥಾನದ ಆವರಣದಲ್ಲಿ 55 ವರ್ಷದ ಮಹಿಳೆಯೊಬ್ಬರು ಮಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ನಂತರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಅಗ್ರಹಾರ ಲೇಔಟ್ ನಿವಾಸಿಯಾದ ಆರೋಪಿ ಮಹಿಳೆ ಸುಜಾತ(55) ಮತ್ತು ಅವರ ಮಗಳು ರಮ್ಯಾ(26) ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಪ್ರಕಾರ, ಸುಜಾತ ತನ್ನ ಮಗಳನ್ನು ಹರಿಹರೇಶ್ವರ ದೇವಸ್ಥಾನಕ್ಕೆ ಬೆಳಗಿನ ಜಾವ 3.45 ರ ಸುಮಾರಿಗೆ ವಿಶೇಷ ಪೂಜೆಯ ನೆಪದಲ್ಲಿ ಕರೆದುಕೊಂಡು ಹೋಗಿದ್ದರು. ರಮ್ಯಾ ದೇವರಿಗೆ ನಮಸ್ಕರಿಸುತ್ತಿದ್ದಾಗ ಆಕೆ ತಾಯಿ ಮಚ್ಚಿನಿಂದ ಹಲ್ಲೆ ಮಾಡಿ, ನಂತರ ದೇವಾಲಯದ ಆವರಣದಲ್ಲಿ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈ ವೇಳೆ ಮಹಿಳೆಯ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮತ್ತು ಮಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುಟುಂಬದಲ್ಲಿ ಪದೇ ಪದೇ ಸಾವು ಸಂಭವಿಸಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಸುಜಾತ ನರಬಲಿ ನೀಡಲು ಪ್ರಯತ್ನಿಸಿರಬಹುದು ಎಂಬ ಅನುಮಾನವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇನ್ನೂ ಯಾವುದೂ ದೃಢಪಟ್ಟಿಲ್ಲ.
"ತಾಯಿ, ಮಗಳು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೇ ಸ್ಪಷ್ಟ ಚಿತ್ರಣ ಸಿಗುತ್ತದೆ ಮತ್ತು ನಾವು ವಿವರವಾದ ಹೇಳಿಕೆಗಳನ್ನು ದಾಖಲಿಸಬಹುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕಳೆದ ಐದಾರು ವರ್ಷಗಳಿಂದ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿವೆ. ಇದು ಸುಜಾತಾ ಅವರನ್ನು ಖಿನ್ನತೆಗೆ ತಳ್ಳಿದೆ. ಅವರ ಪತಿ, ತಾಯಿ ಮತ್ತು ಮೂವರು ಸಹೋದರಿಯರು ಸಾವನ್ನಪ್ಪಿದ್ದಾರೆ. ಎರಡು ವರ್ಷಗಳ ಹಿಂದೆ, ರಮ್ಯಾ ಅವರ ಮಗ ನಿಧನರಾಗಿದ್ದು, ಕೆಲವೇ ದಿನಗಳ ಹಿಂದೆ, ರಮ್ಯಾ ಅವರ ಇನ್ನೊಬ್ಬ ಮಗುವೂ ಸಾವನ್ನಪ್ಪಿತು. ಈ ದುರಂತಗಳು ಸುಜಾತಾ ಅವರು ತನ್ನ ಮಗಳನ್ನು ಮತ್ತು ತನ್ನನ್ನು ತಾನೇ ಕೊಲ್ಲಲು ಯತ್ನಿಸಲು ಪ್ರೇರೇಪಿಸಿವೆ ಎಂದು ಹೇಳಲಾಗಿದೆ.
Advertisement