

ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಕೃಷಿ ಇಲಾಖೆಯು ರೈತರಿಗೆ ಆಯಾ ಪ್ರದೇಶ-ನಿರ್ದಿಷ್ಟ ಸಲಹೆಗಳು ಮತ್ತು ನೈಜ-ಸಮಯದ ಮಾಹಿತಿಯನ್ನು ಒದಗಿಸಲು ಕೃತಕ ಬುದ್ಧಿಮತ್ತೆ-ಚಾಲಿತ(Artificial Intelligence) ವೇದಿಕೆಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
2026 ರ ಖಾರಿಫ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿರುವ ಈ ವ್ಯವಸ್ಥೆಯು ರಾಜ್ಯಾದ್ಯಂತ ಒಂದು ಕೋಟಿಗೂ ಹೆಚ್ಚು ರೈತರಿಗೆ ಪ್ರಯೋಜನ ನೀಡುವ ಗುರಿಯನ್ನು ಹೊಂದಿದೆ.
ಕೃಷಿ ಇಲಾಖೆ ನಿರ್ದೇಶಕ ಜಿ.ಟಿ. ಪುತ್ರ, ಈ ವೇದಿಕೆಯನ್ನು ಇಸ್ರೋ, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಸೆಂಟರ್ ಮತ್ತು ಬಿಇಎಲ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಇದು ಸಿದ್ಧವಾಗಲಿದೆ. ಇಲಾಖೆಯು ಬಿಇಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ವೇದಿಕೆಯನ್ನು ಬೆಂಗಳೂರಿನಲ್ಲಿರುವ ಇಲಾಖೆಯ ಪ್ರಧಾನ ಕಚೇರಿಯಿಂದ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಎಐ ವೇದಿಕೆಯು ರೈತರ ಫೋನ್‌ಗಳಿಗೆ ಕನ್ನಡದಲ್ಲಿ ಸಮಗ್ರ ಸಂದೇಶಗಳನ್ನು ಕಳುಹಿಸುತ್ತದೆ. ಇದು ರೈತರಿಗೆ ಬಳಸಲು ಸುಲಭವಾಗುತ್ತದೆ ಎಂದರು.
ಕೃಷಿ (ವಿಸ್ತರಣೆ, ತರಬೇತಿ ಮತ್ತು ಇ-ಆಡಳಿತ) ಜಂಟಿ ನಿರ್ದೇಶಕಿ ದೀಪಜಾ ಎಸ್‌ಎಂ, ಯೋಜನೆಯು ಪ್ರಸ್ತುತ ಪ್ರಸ್ತಾವನೆಯ ಹಂತದಲ್ಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರತಿನಿಧಿಗೆ(The New Indian Express) ತಿಳಿಸಿದ್ದಾರೆ. ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (FRUBIS) ಅಡಿಯಲ್ಲಿ ನೋಂದಾಯಿಸಲ್ಪಟ್ಟ ಕರ್ನಾಟಕದ ಒಂದು ಕೋಟಿಗೂ ಹೆಚ್ಚು ರೈತರ ದತ್ತಾಂಶ ನಮ್ಮಲ್ಲಿದೆ. ಇದು ಅವರ ಸ್ಥಳ ಮತ್ತು ವಿವರಗಳನ್ನು ಒಳಗೊಂಡಿದೆ ಎಂದು ಹೇಳಿದರು.
ರೈತರಿಗೆ ಬಿತ್ತನೆ ಸಿದ್ಧತೆಯಿಂದ ಬೆಳೆ ಬೆಳವಣಿಗೆ ಮತ್ತು ಕೊಯ್ಲು ಮಾಡುವವರೆಗೆ, ಸಲಹಾ ಸಂದೇಶಗಳನ್ನು ನೀಡಲಾಗುತ್ತದೆ ಎಂದರು.
ರೈತರು ತಮ್ಮ ಜಮೀನು ಹೊಂದಿರುವ ಪ್ರದೇಶ ಅಥವಾ ಹಳ್ಳಿಗೆ ನಿರ್ದಿಷ್ಟವಾದ ಸಂದೇಶಗಳನ್ನು ಸ್ವೀಕರಿಸುತ್ತಾರೆ ಎಂದು ದೀಪಜಾ ಹೇಳಿದರು. ಬಿತ್ತನೆ ಋತುವಿನ ಮೊದಲು, ಅವರು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸಲಹೆಗಳೊಂದಿಗೆ ಮುಂಗಾರು ಮುನ್ಸೂಚನೆಗಳನ್ನು ಪಡೆಯುತ್ತಾರೆ. ಇದರಲ್ಲಿ ಆರಂಭಿಕ ಅಥವಾ ವಿಳಂಬವಾದ ಮಳೆಯ ಮಾಹಿತಿಯೂ ಸೇರಿದೆ.
ಬೆಳೆ ಬೆಳೆಯುವ ಹಂತದಲ್ಲಿ, ಹೆಚ್ಚಿದ ಆರ್ದ್ರತೆ ಅಥವಾ ಯಾವುದೇ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದ್ದರೆ, ಈ ವ್ಯವಸ್ಥೆಯು ಸೂಕ್ತವಾದ ಕೀಟನಾಶಕ ಬಳಕೆಯ ಕುರಿತು ಸಲಹೆಗಳನ್ನು ಕಳುಹಿಸುತ್ತದೆ.
ಅದೇ ರೀತಿ, ಕೊಯ್ಲು ಅವಧಿಯಲ್ಲಿ, ರೈತರು ಕೊಯ್ಲು ವಿಳಂಬ ಮಾಡಬೇಕೆ ಅಥವಾ ತಮ್ಮ ಕೊಯ್ಲು ಮಾಡಿದ ಬೆಳೆಯನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆ ಎಂಬುದರ ಕುರಿತು ಮಾರ್ಗದರ್ಶನದೊಂದಿಗೆ ಹವಾಮಾನ ಎಚ್ಚರಿಕೆಗಳನ್ನು ಸ್ವೀಕರಿಸುತ್ತಾರೆ. ಈ ಎಲ್ಲಾ ಸಂದೇಶಗಳು ಆಯಾ ಪ್ರದೇಶಕ್ಕೆ ತಕ್ಕಂತೆ ಇರುತ್ತದೆ. ರೈತರು ಸಂಬಂಧಿತ ಮತ್ತು ಸಕಾಲಿಕ ಮಾಹಿತಿಯನ್ನು ಪಡೆಯುತ್ತಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ನಿರ್ವಹಿಸುವ ವರುಣ ಮಿತ್ರ ಸಂವಾದಾತ್ಮಕ ಸಹಾಯ ಕೇಂದ್ರವು ಈಗಾಗಲೇ ರೈತರಿಗೆ ಹವಾಮಾನ ಸಂಬಂಧಿತ ಮಾಹಿತಿಗಳನ್ನು ವಿಶೇಷವಾಗಿ ಮಳೆ ಎಚ್ಚರಿಕೆಗಳನ್ನು ನೀಡುತ್ತದೆ. ಪ್ರಸ್ತಾವಿತ ಎಐ-ಆಧಾರಿತ ವ್ಯವಸ್ಥೆಯು ಹೆಚ್ಚು ವಿವರ ಮತ್ತು ಸಮಗ್ರತೆಯನ್ನು ಹೊಂದಿರುತ್ತದೆ.
ಹವಾಮಾನವನ್ನು ಮೀರಿದ ಮಾಹಿತಿಯನ್ನು ಕೂಡ ನೀಡಲಾಗುತ್ತದೆ. ರೈತರು ಸರ್ಕಾರಿ ಯೋಜನೆಗಳ ಕುರಿತು ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಮತ್ತು ಬೆಳೆಗಳ ಉತ್ಪಾದನೆಗೆ ಸಂಬಂಧಿಸಿದ ವಿವಿಧ ಸಲಹೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Advertisement