

ಬೆಂಗಳೂರು: ಒಡಹುಟ್ಟಿದ ತಮ್ಮನನ್ನು ಅಣ್ಣನೇ ಕೊಲೆ ಮಾಡಿ ಮೃತದೇಹವನ್ನು ರಸ್ತೆ ಬದಿಯ ಪೊದೆಗೆ ಎಸೆದಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ಮೂಲದ ಧನರಾಜ್ (24) ಕೊಲೆಯಾದವ. ಹತ್ಯೆ ಮಾಡಿದ ಅಣ್ಣ ಶಿವರಾಜ್(28) ಮತ್ತು ಆತನ ಸ್ನೇಹಿತರಾದ ಸಂದೀಪ್(24), ಪ್ರಶಾಂತ್(26) ಎಂಬುವರನ್ನು ಬನ್ನೇರುಘಟ್ಟ ಪೊಲೀಸ್ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್ ನೇತೃತ್ವದ ತಂಡ ಬಂಧಿಸಿದೆ.
ಕುಡಿದು ಬಂದು ಗಲಾಟೆ ಮಾಡುವುದಲ್ಲದೆ, ಕಳ್ಳತನಕ್ಕೂ ಇಳಿದಿದ್ದ ತಮ್ಮನ ಕಾಟ ತಾಳಲಾರದೆ ಒಡ ಹುಟ್ಟಿದವನನ್ನು ಅಣ್ಣನೇ ಮರ್ಡರ್ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಕೊಲೆಯಾದ ಧನರಾಜ್ ಕಲಬುರಗಿಯಲ್ಲಿಯೇ ತಂದೆ-ತಾಯಿಯ ಜೊತೆ ವಾಸವಿದ್ದ. ಕೆಲಸಕ್ಕೆ ಹೋಗದೆ ಕಳ್ಳತನ ಮಾಡೋದರ ಜೊತೆಗೆ, ಕುಡಿದು ಬಂದು ಹೆತ್ತವರ ಮೇಲೆ ನಿತ್ಯ ಹಲ್ಲೆ ಮಾಡ್ತಿದ್ದ.
ಪ್ರಶ್ನೆ ಮಾಡಿದ ಸಹೋದರ ಶಿವರಾಜನ ಮೇಲೂ ಹಲವು ಬಾರಿ ಹಲ್ಲೆ ನಡೆಸಿದ್ದು, ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದ. ಮೊಬೈಲ್, ಕುರಿ ಸೇರಿದಂತೆ ಸಿಕ್ಕ ಸಿಕ್ಕ ಕಡೆ ಈತ ಕಳ್ಳತನ ಮಾಡುತ್ತಿದ್ದ. ಈತನ ಕೆಲಸದಿಂದಾಗಿ ಅದೆಷ್ಟೋ ಬಾರಿ ಮನೆ ಬಳಿ ಬಂದು ಜನರು ಗಲಾಟೆ ಮಾಡಿದ್ದರು. ಹೀಗಾಗಿ ಸಹೋದರ ಧನರಾಜ್ನ ಕಾಟ ತಾಳಲಾರದೆ ಆತನ ಕೊಲೆಗೆ ಸ್ನೇಹಿತರ ಜೊತೆ ಸೇರಿ ಶಿವರಾಜ್ ಪ್ಲ್ಯಾನ್ ಮಾಡಿದ್ದ.
ಅದರ ಭಾಗವಾಗಿ ಕೆಲಸ ಕೊಡಿಸೋದಾಗಿ ಹೇಳಿ ಧನರಾಜ್ನನ್ನು ಬೆಂಗಳೂರಿಗೆ ಕರೆದಿದ್ದ. ಬೆಂಗಳೂರಿಗೆ ಬಂದ ಧನರಾಜ್ ಕಾರಿನಲ್ಲಿ ಕುಳಿತು ಮೊಬೈಲ್ ನೋಡ್ತಿದ್ದ ವೇಳೆ ಆತನ ಕೈಗಳನ್ನು ಹಿಂಬದಿಯಿಂದ ಶಿವರಾಜ್ ಸ್ನೇಹಿತರಾದ ಸಂದೀಪ್ ಮತ್ತು ಪ್ರಶಾಂತ್ ಹಿಡಿದುಕೊಂಡಿದ್ದಾರೆ.
ಈ ವೇಳೆ ಮಚ್ಚಿನಿಂದ ಧನರಾಜ್ ಕತ್ತಿನ ಭಾಗಕ್ಕೆ ಹೊಡೆದು ಕಾರಿನಲ್ಲಿಯೇ ಶಿವರಾಜ್ ಕೊಲೆ ಮಾಡಿದ್ದಾನೆ. ಬಳಿಕ ಕಗ್ಗಲೀಪುರ ರಸ್ತೆ ಬದಿಯ ಪೊದೆಯಲ್ಲಿ ಶವ ಎಸೆದು ಆರೋಪಿಗಳು ಎಸ್ಕೇಪ್ ಆಗಿದ್ದರು.
ಪ್ರಕರಣ ಸಂಬಂಧ ತನಿಖೆ ವೇಳೆ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದಾಗ ಆರೋಪಿಗಳು ಶವ ಎಸೆದು ಹೋಗಿರೋದು ಗೊತ್ತಾಗಿದೆ. ಕಾರಿನ ನಂಬರ್ ಆಧರಿಸಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.
Advertisement