

ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಕಾದಾಟ ನಡೆಯುತ್ತಿರುವಂತೆಯೇ ವರದಿಗಾರರ ಪ್ರಶ್ನೆಗೆ ಉಪ ಮಖ್ಯಮಂತ್ರಿ ಡಿಕೆ ಶಿವಕುಮಾರ್ ತಾಳ್ಮೆ ಕಳೆದುಕೊಂಡ ಪ್ರಸಂಗ ಶನಿವಾರ ನಡೆಯಿತು.
ತಪ್ಪು ಮಾಹಿತಿ ಹಂಚಿಕೊಳ್ಳುವ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ನನ್ನನ್ನು ಎತ್ತಿ ಕಟ್ಟಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಲ ವರದಿಗಾರರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಸಿಡಿಮಿಡಿಗೊಂಡರು. ಅಲ್ಲದೆ ಅವರು ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದರು.
ಏನಾಯಿತು?
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ. ಡಿಕೆ ಶಿವಕುಮಾರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಡಿಕೆ ಶಿವಕುಮಾರ್ ಅವರನ್ನು ಕೆಲ ಪತ್ರಕರ್ತರು ಕೇಳಿದರು. ಈ ವೇಳೆ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್, ಇಂತಹ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಾದ ಕೆಲ ಸಮಯದ ನಂತರ ಕುಮಾರಸ್ವಾಮಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂಬುದನ್ನು ಡಿಕೆ ಶಿವಕುಮಾರ್ ಅವರ ತಂಡಕ್ಕೆ ಗೊತ್ತಾಗಿದೆ. ಶನಿವಾರ ಜೆಡಿ(ಎಸ್) ರಜತ ಮಹೋತ್ಸವದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆಲವು "ಸ್ಫೋಟಕ ಬೆಳವಣಿಗೆಗಳು" ನಡೆಯುತ್ತಿವೆ. ತಮ್ಮ ಕಾರ್ಯಕರ್ತರು ಜನರಿಗೆ ಹತ್ತಿರವಾಗಿರಿ ಮತ್ತು ಅವರ ಕಷ್ಟಗಳಿಗೆ ಸ್ಪಂದಿಸಿ" ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಅಧಿಕಾರಕ್ಕಾಗಿ ನಡೆಯುತ್ತಿರುವ ಗುದ್ದಾಟವನ್ನು ಗಮನದಲ್ಲಿಟ್ಟುಕೊಂಡು ಅವರು ಈ ಹೇಳಿಕೆ ನೀಡಿದರು ಎನ್ನಲಾಗಿದೆ.
ಕುಮಾರಸ್ವಾಮಿಯವರ ಮಾತನ್ನು ವರದಿಗಾರರು ತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ ಎಂದು ತಿಳಿದು ಕೋಪಗೊಂಡ ಶಿವಕುಮಾರ್, ಯಾವುದೇ ಕಾರಣವಿಲ್ಲದೆ ಕೇಂದ್ರ ಸಚಿವರ ವಿರುದ್ಧ ತಮ್ಮನ್ನು ಎತ್ತಿಕಟ್ಟಿದ್ದಕ್ಕೆ ಕೇಂದ್ರ ಸಚಿವರಲ್ಲಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು.
ನಂತರ, ಉಪಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪ್ರಶ್ನೆ ಕೇಳುವಾಗ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾದ ವರದಿಗಾರರ ವರ್ತನೆಯನ್ನು ಖಂಡಿಸಿರುವುದಾಗಿ ಹೇಳಲಾಗಿದೆ.
ಮಾಧ್ಯಮಗಳು ಸುಳ್ಳು ಮಾಹಿತಿಯನ್ನು ಸೃಷ್ಟಿಸಬಾರದು ಮತ್ತು ಸುಳ್ಳು ಪ್ರಶ್ನೆಗಳನ್ನು ಕೇಳಬಾರದು. ಇದು ಮಾಧ್ಯಮದ ಗೌರವ, ಘನತೆ ಮತ್ತು ವಿಶ್ವಾಸಕ್ಕೆ ಹಾನಿ ಮಾಡುತ್ತದೆ ಎಂದು ಉಪ ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಖಂಡಿಸಲಾಗಿದೆ.
Advertisement