

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳಿನ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಈ ಕುಸಿತ ರೈತರಲ್ಲಿ ದುಃಖವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಬರೆದ ಪತ್ರದಲ್ಲಿ, ಈ ಖಾರಿಫ್ ಋತುವಿನಲ್ಲಿ ಕರ್ನಾಟಕದಲ್ಲಿ 17.94 ಲಕ್ಷ ಹೆಕ್ಟೇರಿಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆ ಜೋಳ ಹಾಗೂ 4.16 ಲಕ್ಷ ಹೆಕ್ಟೇರಿಗೂ ಹೆಚ್ಚು ಪ್ರದೇಶದಲ್ಲಿ ಹೆಸರುಕಾಳನ್ನು ಬೆಳೆಯಲಾಗಿದ್ದು, ರಾಜ್ಯದಲ್ಲಿ ಸುಮಾರು 54.74 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಮೆಕ್ಕೆ ಜೋಳ ಮತ್ತು 1.983 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಹೆಸರುಕಾಳು ಉತ್ಪಾದನೆಯಾಗುವ ನಿರೀಕ್ಷೆಯಿದೆ. ಸದ್ಯದ ಮಾರುಕಟ್ಟೆ ಪರಿಸ್ಥಿತಿಯು ಇದನ್ನು ಮತ್ತಷ್ಟು ಸಂಕಷ್ಟವನ್ನಾಗಿ ಪರಿವರ್ತಿಸಿದೆ ಎಂದಿದ್ದಾರೆ
ಕೇಂದ್ರ ಸರ್ಕಾರವು ಮೆಕ್ಕೆ ಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ ₹2,400 ಹಾಗೂ ಹೆಸರುಕಾಳಿಗೆ ₹8,768 ಕನಿಷ್ಟ ಬೆಂಬಲ ಬೆಲೆ ಘೋಷಿಸಿದ್ದರೂ, ಕರ್ನಾಟಕದಲ್ಲಿ ಸದ್ಯ ಮಾರುಕಟ್ಟೆ ಬೆಲೆ ಪ್ರತಿ ಟನ್ ಮೆಕ್ಕೆಜೋಳಕ್ಕೆ ₹1600-1800 ಮತ್ತು ಹೆಸರುಕಾಳಿಗೆ ಪ್ರತಿ ಟನ್‌ಗೆ ಸುಮಾರು 5,400 ರೂ. ಆಸುಪಾಸಿನಲ್ಲಿರುವುದು ತೀವ್ರ ಮತ್ತು ಹಿಂದೆಂದೂ ಕಾಣದ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಮಾರುಕಟ್ಟೆ ಬೆಲೆಗಳು (ಮಾದರಿ ಬೆಲೆಗಳು) ಕನಿಷ್ಠ ಬೆಂಬಲ ಬೆಲೆ (MSP) ಗಿಂತ ಹೆಚ್ಚಿದ್ದರೂ, ಇತ್ತೀಚಿನ ಬಾಹ್ಯ ಅಂಶಗಳು ಮತ್ತು ಪೂರೈಕೆ ಮತ್ತು ಬೇಡಿಕೆಯಲ್ಲಿನ ಅಸಮತೋಲನವು ಬೆಲೆಗಳು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಸುಮಾರು 32 ಲಕ್ಷ ಮೆಟ್ರಿಕ್ ಟನ್ ಮೆಕ್ಕೆ ಜೋಳ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ ಲಭ್ಯವಿದ್ದು, ಸ್ಥಳೀಯ ಕೈಗಾರಿಕೆಗಳ ಬಳಕೆಯ ಸಾಮರ್ಥ್ಯಕ್ಕಿಂತ ಇದು ಹೆಚ್ಚಾಗಿದೆ. ಆದ್ದರಿಂದ ಭಾರತ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ, FCI, NAFED ಹಾಗೂ ಇತರ ಖರೀದಿ ಸಂಸ್ಥೆಗಳು ತಕ್ಷಣ ಬೆಲೆ ಬೆಂಬಲ ಯೋಜನೆ ಅಥವಾ ಸೂಕ್ತ ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ ಮೆಕ್ಕೆ ಜೋಳ ಮತ್ತು ಹೆಸರುಕಾಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ಆದೇಶಿಸಬೇಕು ಎಂದಿದ್ದಾರೆ.
ಎಥೆನಾಲ್ ಪೂರೈಕೆ ಸರಪಳಿಯಿಂದ ಕರ್ನಾಟಕದ ರೈತರಿಗೆ ನ್ಯಾಯಯುತ ಪ್ರಯೋಜನ ಸಿಗುವಂತಾಗಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿದ್ದಾರೆ. ಮೆಕ್ಕೆಜೋಳ ಆಧಾರಿತ ಎಥೆನಾಲ್‌ನ ಮೂಲ ದರ ಲೀಟರ್‌ಗೆ 266.07 ರೂ. ಆಗಿದ್ದು, ಜೊತೆಗೆ ಪ್ರತಿ ಲೀಟರ್‌ಗೆ 5.79 ರೂ. ಹೆಚ್ಚುವರಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದು ಅವರು ಗಮನಸೆಳೆದರು.
ಮೆಕ್ಕೆ ಜೋಳದಿಂದ ಉತ್ಪಾದಿತ ಎಥೆನಾಲ್‌ಗೆ ಮೂಲ ದರ ಲೀಟರ್‌ಗೆ ₹66.07 ಇದ್ದು, ಜೊತೆಗೆ ಪ್ರತಿ ಲೀಟರ್ ಎಥೆನಾಲ್‌ಗೆ ₹5.79 (GST ಹೊರತುಪಡಿಸಿ) ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ, ಕರ್ನಾಟಕದ ಅನೇಕ ಎಥೆನಾಲ್ ಘಟಕಗಳು ರೈತರ ಬದಲಿಗೆ ಮಧ್ಯವರ್ತಿಗಳಿಂದ ಮತ್ತು ವ್ಯಾಪಾರಿಗಳಿಂದ ಮೆಕ್ಕೆ ಜೋಳ ಖರೀದಿಸುತ್ತಿವೆ. ಇದು ಎಂಎಸ್‌ಪಿ ಮತ್ತು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
Advertisement