

ಬೆಂಗಳೂರು: ಲೇಖಕ ಡಾ. ನಟರಾಜ್ ತಲಘಟ್ಟಪುರ ಅವರ 'ಬಣ್ಣ ಮೆಚ್ಚಿದವರು' ಕನ್ನಡ ನಾಟಕದ ಇಂಗ್ಲೀಷ್ ಅನುವಾದ 'ಅಡ್ಮೈರರ್ಸ್ ಆಫ್ ಕಲರ್' ಮತ್ತು ಹಿಂದಿ ಅನುವಾದ 'ರಂಗೋನ್ ಕೆ ಉಪಾಸಕ್'' ಕೃತಿಗಳು ಸೇರಿದಂತೆ ಐದು ಕೃತಿಗಳನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಬಿ.ಎಲ್. ಶಂಕರ್ ಅವರು ಶನಿವಾರ ಸಂಜೆ ಲೋಕಾರ್ಪಣೆ ಮಾಡಿದರು.
ಜಯನಗರ 4ನೇ ಬ್ಲಾಕಿನ ಭಾರತ್ ಎಜುಕೇಷನ್ ಸೊಸೈಟಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಬಿ.ಎಲ್. ಶಂಕರ್, ನಾಟಕಕಾರ ನಟರಾಜ್ ಅವರು ವಿಶ್ವವಿಖ್ಯಾತ ಕಲಾವಿದ ಸ್ವೆತಾಸ್ಲೋವ್ ರೋರಿಕ್ ಅವರ ಜೀವನಕ್ಕೆ ‘ಬಣ್ಣ ಮೆಚ್ಚಿದವರು' ನಾಟಕ ರೂಪ ನೀಡಿರುವುದು ವಿಶೇಷವಾಗಿದೆ.
ಈ ಕನ್ನಡ ನಾಟಕವನ್ನು ಇಂಗ್ಲೀಷ್ ಹಾಗೂ ಹಿಂದಿಗೆ ಭಾಷಾಂತರ ಮಾಡಿಸಿ, ಕೃತಿಗಳನ್ನು ಹೊರತರುವ ಮೂಲಕ ನಟರಾಜ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ರೋರಿಕ್ ಹಾಗೂ ಅವರ ಪತ್ನಿ, ಭಾರತೀಯ ಚಿತ್ರರಂಗದ ಹೆಸರಾಂತ ನಟಿ ದೇವಿಕಾ ರಾಣಿಯವರ ಜೀವನ ಮತ್ತು ಅವರ ಜೀವನವನ್ನು ಇತರ ಭಾಷಾ ಓದುಗರಿಗೆ ಪರಿಚಯಿಸುತ್ತಿರುವುದು ಉಭಯ ಕಲಾವಿದರನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಜನಪ್ರಿಯಗೊಳಿಸುತ್ತದೆ. ಅದಕ್ಕಾಗಿ ನಟರಾಜ್ ಅವರನ್ನು ಅಭಿನಂದಿಸುತ್ತೇನೆ ಎಂದರು.
ರೋರಿಕ್ ಅವರು ಹೆಚ್ಚು ನೀಲಿ ಬಣ್ಣವನ್ನು ಇಷ್ಟಪಡುತ್ತಿದ್ದರು ಎಂದು ಹೇಳಿದ ಶಂಕರ್ ಅವರು, ರೋರಿಕ್ ಅವರೇ ತಯಾರಿಸುತ್ತಿದ್ದ ನೀಲಿ ಬಣ್ಣ ‘ರೋರಿಕ್ ಬ್ಲೂ' ಎಂದೇ ಖ್ಯಾತಿಯಾಗಿದ್ದು, ಬೇರೆಲ್ಲೂ ಅದು ಸಿಗುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಡಾ. ನಟರಾಜ್ ಅವರು ರಚಿಸಿರುವ ಐತಿಹಾಸಿಕ ನಾಟಕ 'ಬಯಲ ರೂಪ', ನಾಟಕ 'ಬೊಗಸೆ ತುಂಬ ಮಣ್ಣು' ಹಾಗೂ ಕಥಾ ಸಂಕಲನ 'ಮಿಡಿನಾಗರಗಳ ನಡುವೆ' ಕೃತಿಗಳನ್ನು ಬಿಡುಗಡೆ ಮಾಡಿದ ಶಂಕರ್ ಅವರು, ಐದು ಕೃತಿಗಳನ್ನು ಬಹಳ ಸಂತಸದಿಂದ ಲೋಕಾರ್ಪಣೆಗೊಳಿಸಿರುವುದಾಗಿ ತಿಳಿಸಿದರು.
ಈ ಕೃತಿಗಳ ಕುರಿತು ಮಾತನಾಡಿದ ಲೇಖಕ ಹಾಗೂ ಪತ್ರಕರ್ತರಾದ ರಘುನಾಥ ಚ.ಹ. ಅವರು, ನಟರಾಜ್ ಅವರು ನಾಟಕಗಳಲ್ಲಿ ಆಯ್ದುಕೊಂಡಿರುವ ವಸ್ತುವಿಷಯಗಳು ಪ್ರಸ್ತುತ ಕಾಲಘಟ್ಟದ ಬಿಕ್ಕಟ್ಟುಗಳ ಜೊತೆ ಅನುಸಂಧಾನ ಮಾಡುತ್ತವೆ. ಅವರ ಕಥೆ ಮತ್ತು ನಾಟಕದಲ್ಲಿ ಸಂಬಂಧಗಳ ಬಿಕ್ಕಟ್ಟುಗಳನ್ನು, ಧರ್ಮ ಸಂಘರ್ಷಗಳನ್ನು ತೆಗೆದುಕೊಂಡು ಮಾನವೀಯ ನೆಲೆಯಲ್ಲಿ ಸ್ಥಿರಗೊಳಿಸಿರುವುದು ಲೇಖಕರ ಶಕ್ತಿ. ನಾಟಕವನ್ನು ಪ್ರಧಾನ ಅಭಿವ್ಯಕ್ತಿಯನ್ನಾಗಿಸಿಕೊಂಡಿರುವ ವಿರಳ ವ್ಯಕ್ತಿಗಳ ಸಾಲಿಗೆ ನಟರಾಜ್ ಅವರು ಸೇರುತ್ತಾರೆ. ನಾಟಕಕಾರರಿಗೆ ಕಥೆ ಬರೆಯುವುದು ಸವಾಲು. ಅದನ್ನು ಮೀರಿ ನಟರಾಜ್ ಅವರು ಕಥೆಗಳನ್ನೂ ಬರೆದಿರುವುದು ಕೂಡ ವಿಶೇಷ ಎಂದರು. ನಟರಾಜ್ ಅವರ ಕೃತಿಗಳಲ್ಲಿ ಒಳಿತು-ಕೆಡುಕುಗಳ ಸಂಘರ್ಷ ಎದ್ದುಕಾಣುತ್ತದೆ. ಅವರು ಕೃತಿಗಳಲ್ಲಿ ಬಳಸಿರುವ ಭಾಷೆ ತುಂಬಾ ವಿಶೇಷ ಹಾಗೂ ಪರಿಣಾಮಕಾರಿ ಎಂದು ರಘುನಾಥ್ ಪ್ರಶಂಸಿದರು.
ನಾಟಕಕಾರ ನಟರಾಜ್ ಮಾತನಾಡಿ, ‘ಬಣ್ಣ ಮೆಚ್ಚಿದವರು’ ಕೃತಿ ರೋರಿಕ್ ಹಾಗೂ ದೇವಿಕಾ ರಾಣಿ ಅವರು ಎರಡು ದಂತ ಕಥೆಗಳ ಕಲೆ ಮತ್ತು ಜೀವನ ಆಧರಿಸಿದ್ದಾಗಿದೆ. ‘ಬೊಗಸೆ ತುಂಬ ಮಣ್ಣು' ನಾಟಕದಲ್ಲಿನ ಪ್ರಮುಖ ಪಾತ್ರದಾರಿ ವರನಂದಮ್ಮ ತಮ್ಮ ತಾಯಿಯವರ ಸೈದ್ಧಾಂತಿಕತೆಯನ್ನು ಪ್ರಸ್ತುತಪಡಿಸುತ್ತದೆ. ‘ಬಯಲ ರೂಪ’ ನಾಟಕ ಕೂಡ ಓದುಗರ ಮೆಚ್ಚುಗೆ ಪಡೆದು, ಪ್ರಶಸ್ತಿಗೆ ಭಾಜನವಾಗಿದೆ. ಕಥಾ ಸಂಕಲನ ‘ಮಿಡಿನಾಗರಗಳ ನಡುವೆ' ನನ್ನೂರಾದ ತಲಘಟ್ಟಪುರದ ಕಥೆಗಳ ಸಂಕಲನವಾಗಿದೆ. ತಾವು ರಚಿಸಿರುವ ಕೃತಿಗಳ ಬಗ್ಗೆ ಓದುಗ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ತಾವು ಮತ್ತಷ್ಟು ಉತ್ಕೃಷ್ಟ ಕೃತಿಗಳನ್ನು ಬರೆಯಲು ಚೈತನ್ಯ ಹಾಗೂ ಹುಮ್ಮಸ್ಸು ತಂದುಕೊಟ್ಟಿದೆ. ಆ ನಿಟ್ಟಿನಲ್ಲಿ ಮುನ್ನಡೆಯುತ್ತೇನೆ ಎಂದರು.
'ಬಣ್ಣ ಮೆಚ್ಚಿದವರು' ನಾಟಕವನ್ನು ಇಂಗ್ಲಿಷ್ ಗೆ ಅನುವಾದಿಸಿರುವ ಡಾ. ರೇಖಾ ಕೌಶಿಕ್ ಪಿ. ಆರ್. ಹಾಗೂ ಹಿಂದಿಗೆ ಅನುವಾದಿಸಿರುವ ಪ್ರೊ. ಷಾಕಿರಾ ಖಾನಂ ಅವರು ತಾವು ಅನುವಾದಿಸಿರುವ ಕೃತಿಗಳ ಕುರಿತು ಇದೇ ಸಂದರ್ಭದಲ್ಲಿ ಮಾತನಾಡಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಷಾಕಿರಾ ಖಾನಂ, ಡಾ. ರೇಖಾ ಕೌಶಿಕ್ ಪಿ. ಆರ್., ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಬಿ.ಎಲ್. ಶಂಕರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ, ಲೇಖಕ ಹಾಗೂ ಪತ್ರಕರ್ತ ರಘುನಾಥ ಚ.ಹ., ನಾಟಕಕಾರ ಡಾ. ನಟರಾಜ್ ತಲಘಟ್ಟಪುರ ಉಪಸ್ಥಿತರಿದ್ದರು.
Advertisement