

ಬೆಂಗಳೂರು: ಹೆಚ್ಚಿನ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್), ಸಿಎಸ್‌ಆರ್ ನಿಧಿಯ ಬೆಂಬಲದೊಂದಿಗೆ ಉಕ್ಕಿನ ಕಸ ಸಂಗ್ರಹ ತೊಟ್ಟಿಗಳನ್ನು ಇಡಲು ಸಿದ್ಧತೆ ನಡೆಸಿದೆ.
ಈ ಕುರಿತು TNIE ಜೊತೆಗೆ ಮಾತನಾಡಿದ BSWML CEO ಕರೀ ಗೌಡ, ಸಂಸ್ಥೆಯೊಂದು ನಗರದಾದ್ಯಂತ 1,000 ಕಸದ ತೊಟ್ಟಿಗಳನ್ನು ದಾನ ಮಾಡಲು ಮುಂದಾಗಿದ್ದು, ಇವುಗಳನ್ನು ಇಡಲಾಗುವುದು ಎಂದರು.
ಈ ತೊಟ್ಟಿಗಳ ವಿಶೇಷತೆಯೆಂದರೆ ಅವುಗಳನ್ನು ಸಸ್ಯಗಳ ಮೇಲೂ ಇರಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.
ಹಸಿ ಮತ್ತು ಒಣ ತ್ಯಾಜ್ಯಗಳಿಗೆ ಪ್ರತ್ಯೇಕ ಸ್ಥಳವಕಾಶ ಇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಬಾಟಲಿಗಳು, ಚಿಪ್ಸ್, ಚಾಕೊಲೇಟ್ ಕವರ್‌ಗಳು, ಟಿಶ್ಯೂ ಪೇಪರ್ ಮತ್ತಿತರ ಕಸ ಹಾಕುವುದಕ್ಕೆ ಸಮಸ್ಯೆ ಇರುವುದು ಕಂಡುಬಂದಿದೆ. ಬಸ್ ನಿಲ್ದಾಣಗಳು, ವಾಣಿಜ್ಯ ಕೇಂದ್ರಗಳು ಮತ್ತು ರಸ್ತೆಗಳಲ್ಲಿ ನಮಗೆ ಹೆಚ್ಚಿನ ಕಸದ ತೊಟ್ಟಿಗಳು ಬೇಕಾಗುತ್ತವೆ. ಖಾಸಗಿ ಸಂಸ್ಥೆಗಳ ಬೆಂಬಲದೊಂದಿಗೆ ಕಸದ ತೊಟ್ಟಿಗಳನ್ನು ಅವು ಹೆಚ್ಚು ಅಗತ್ಯವಿರುವ ಸ್ಥಳಗಳಲ್ಲಿ ಇರಿಸಲು ಸಜ್ಜಾಗುತ್ತಿದ್ದೇವೆ ಎಂದು ಅವರು ಹೇಳಿದರು.
ರಸ್ತೆ ಬದಿಗಳಲ್ಲಿ, ಒದ್ದೆಯಾದ ತ್ಯಾಜ್ಯಕ್ಕಿಂತ ಹೆಚ್ಚು ಒಣ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆದ್ದರಿಂದ ಹೆಚ್ಚು ಒಣ ತ್ಯಾಜ್ಯವನ್ನು ಇರಿಸಲು ಈ ತೊಟ್ಟಿಗಳನ್ನು ವಿನ್ಯಾಸಗೊಳಿಸಲಾಗಿದೆ. 1,000 ತೊಟ್ಟಿಗಳಿಂದ ಸಂಗ್ರಹಿಸಿದ ಬೇರ್ಪಡಿಸಿದ ತ್ಯಾಜ್ಯವನ್ನು BSWML ನಿಯಮಿತವಾಗಿ ತೆರವುಗೊಳಿಸುತ್ತದೆ. ಕಸದ ತೊಟ್ಟಿ ಮಾದರಿಯನ್ನು ಅಂತಿಮಗೊಳಿಸಿದ್ದು, ಪ್ರತಿ ಬಿನ್‌ನ ವೆಚ್ಚದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
Advertisement