

ಬೆಂಗಳೂರು: ಬೆಂಗಳೂರಿನಲ್ಲಿ 30 ಕ್ಕೂ ಹೆಚ್ಚು ಜನರು ಕೇಸರಿ ಒಳಾಂಗಣ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಕೇಸರಿ ಬೆಳೆಯುವ ವಿಧಾನಗಳು ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿದ್ದು, ಈಗ ಅವು ನಿಧಾನವಾಗಿ ಟ್ರೆಂಡ್ ಆಗುತ್ತಿವೆ.
ಇದನ್ನು ಸಾಮಾನ್ಯವಾಗಿ ಗುಡ್ಡಗಾಡು ಅಥವಾ ಪರ್ವತ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಬೆಂಗಳೂರು ಸೇರಿ ಶೃಂಗೇರಿ, ಕುಣಿಗಲ್ ಮತ್ತು ತುಮಕೂರಿನಲ್ಲಿ ಈ ಪದ್ಧತಿ ವಿರಳವಾಗಿದ್ದರೂ ಸಹ ಪ್ರಚಲಿತವಾಗಿದೆ.
ಬೆಂಗಳೂರು ಗುಡ್ಡಗಾಡು ಪ್ರದೇಶವಲ್ಲದಿದ್ದರೂ, ಅದರ ಎತ್ತರ ಮತ್ತು ಹವಾಮಾನವು ಕೇಸರಿ ಬೆಳೆಯಲು ಅನುಕೂಲಕರವಾಗಿದೆ ಎಂದು ಕರ್ನಾಟಕ ಕೇಸರಿ ರೈತರ ಸಂಘದ (ಕೆಎಸ್‌ಎಫ್‌ಎ) ಸಂಸ್ಥಾಪಕ ಮತ್ತು ಮುಖ್ಯ ಕಾರ್ಯದರ್ಶಿ ಲೋಕೇಶ್ ವೊಲಿವಿನ್ ಹೇಳಿದರು.
ನಮ್ಮ ಹೆಚ್ಚಿನ ಸದಸ್ಯರು ಸಾಂಪ್ರದಾಯಿಕ ಕೃಷಿ ಕುಟುಂಬಗಳಿಂದ ಬಂದವರು, ಆದಾಗ್ಯೂ ಅವರಲ್ಲಿ ಹಲವರು ಪ್ರಸ್ತುತ ಐಟಿ, ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ಸಂಶೋಧನೆ ಸೇರಿದಂತೆ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ವೈದ್ಯರು ಅಥವಾ ಅಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವೊಲಿವಿನ್ ಹೇಳಿದರು.
ಕೇಸರಿ ಗಿಡ ಹೂಬಿಡುವುದು ಅತ್ಯಂತ ನಿರ್ಣಾಯಕ ಹಂತವಾಗಿದೆ. ತಾಪಮಾನ, ತೇವಾಂಶ ಅಥವಾ ಬೆಳಕಿನಲ್ಲಿನ ಸಣ್ಣ ಏರಿಳಿತವು ಸಹ ಹೂವಿನ ಇಳುವರಿಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಮತ್ತೊಂದು ಸವಾಲು ಎಂದರೆ ಗುಣಮಟ್ಟದ ಕೇಸರಿ ಗೆಡ್ಡೆಗಳ ಲಭ್ಯತೆ ಮತ್ತು ವೆಚ್ಚ. ಕೇಸರಿ ಗೆಡ್ಡೆಗಳನ್ನು ಬಹುತೇಕ ಸಂಪೂರ್ಣವಾಗಿ ಕಾಶ್ಮೀರದಿಂದಲೇ ಪಡೆಯಬೇಕಾಗಿದೆ. ಕಳೆದ ಐದು ವರ್ಷಗಳಲ್ಲಿ, ಗೆಡ್ಡೆ ಬೆಲೆಗಳು ಕೆಜಿಗೆ ಸುಮಾರು 250 ರೂ.ಗಳಿಂದ 3,000 ರೂ.ಗಳಿಗೆ ಏರಿದೆ, ಹೀಗಾಗಿ ಅಗತ್ಯವಿರುವ ಬೆಂಬಲ ಸಿಗುತ್ತಿಲ್ಲ ಎಂದು ವೋಲಿವಿನ್ ತಿಳಿಸಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮತ್ತು ಸಂಶೋಧನಾ ಸಂಸ್ಥೆಗಳಿಂದ ಸೀಮಿತ ಸಾಂಸ್ಥಿಕ ಅಥವಾ ತಾಂತ್ರಿಕ ಬೆಂಬಲವಿದೆ. ಗುಣಮಟ್ಟದ ಗೆಡ್ಡೆಗಳು ಮತ್ತು ಪರಿಸರ ನಿಯಂತ್ರಣವನ್ನು ಖಚಿತಪಡಿಸಿಕೊಂಡರೆ ಅದು ಆರ್ಥಿಕವಾಗಿ ಸುಸ್ಥಿರವಾಗಿರುತ್ತದೆ. ಹೂಡಿಕೆ, ಸರ್ಕಾರಿ ಬೆಂಬಲದ ಕೊರತೆ ಮತ್ತು ತಾಂತ್ರಿಕ ಸವಾಲುಗಳು ಈ ವಲಯಕ್ಕೆ ಹೊಸಬರಿಗೆ ಪ್ರಮುಖ ಅಡೆತಡೆಗಳಾಗಿ ಉಳಿದಿವೆ ಎಂದು ಅವರು ಹೇಳಿದರು.
ಪ್ರೀಮಿಯಂ ಮತ್ತು ನಗರ ಮಾರುಕಟ್ಟೆಗಳಲ್ಲಿ ಕೇಸರಿಗೆ ಬೇಡಿಕೆ ಹೆಚ್ಚುತ್ತಿದೆ. ಸಾಮಾನ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೇಸರಿಯಲ್ಲಿ ಹೆಚ್ಚಿನ ಭಾಗವು ಕಲಬೆರಕೆ ಅಥವಾ ಕಳಪೆ ಗುಣಮಟ್ಟದ್ದಾಗಿದೆ ಎಂದು ಹಲವರ ಗಮನಕ್ಕೆ ಬಂದಿದೆ. ಹೀಗಾಗಿ, ಜನರು ಹೆಚ್ಚಿನ ಬೆಲೆಗೆ ಶುದ್ಧ ಮತ್ತು ಸ್ಥಳೀಯವಾಗಿ ಬೆಳೆದ ಕೇಸರಿಯನ್ನು ಸಕ್ರಿಯವಾಗಿ ಹುಡುಕುತ್ತಿದ್ದಾರೆ.
ಪ್ರಸ್ತುತ, ಶುದ್ಧ ಕೇಸರಿಯನ್ನು ಪ್ರತಿ ಗ್ರಾಂಗೆ ಸುಮಾರು 2,000 ರೂ.ಗಳ ಬೆಲೆಗೆ ಖರೀದಿಸಲಾಗುತ್ತದೆ. ಅದರ ಔಷಧೀಯ ಮತ್ತು ಕ್ಷೇಮ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವ ಗ್ರಾಹಕರು ಶುದ್ದ ಕೇಸರಿಗಾಗಿ ಎಷ್ಟು ಹಣ ಬೇಕಾದರೂ ಪಾವತಿಸಲು ಸಿದ್ಧರಿದ್ದಾರೆ ಎಂದು ಅವರು ಹೇಳಿದರು.
Advertisement