

ಕೊಪ್ಪಳ: ಜಿಲ್ಲಾ ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್‌ಗಳ ಕೊರತೆಯಿಂದಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಮೂರನೇ ಮಹಡಿಯಿಂದ ಕೆಳಗೆ ಹೊತ್ತುಕೊಂಡೇ ಬಂದಿರುವ ಘಟನೆ ವರದಿಯಾಗಿದೆ.
ಕೊಪ್ಪಳ ತಾಲ್ಲೂಕಿನ ಇಂದಿರಾ ನಗರದ ನಿವಾಸಿ ಯಮನಮ್ಮ (64) ಅವರನ್ನು ಕಳೆದ ಮೂರು ದಿನಗಳಿಂದ ಅಪಸ್ಮಾರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ, ಮಹಿಳೆ ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡರು.
ಮೂರನೇ ಮಹಡಿಯಲ್ಲಿದ್ದ ತನ್ನ ತಾಯಿಗೆ ಚಿಕಿತ್ಸೆ ನೀಡಲು ಯಾವುದೇ ವೈದ್ಯರು ಬಾರದಿದ್ದಾಗ, ಕೃಷ್ಣ ತಾವೇ ಅವರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗಲು ಮುಂದಾದರು. ಆಗ ಅದೇ ವಾರ್ಡ್‌ನಲ್ಲಿದ್ದ ಇತರ ರೋಗಿಗಳು ವಿಡಿಯೋ ಸೆರೆಹಿಡಿದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಹಳ್ಳಿಯವರಾದ ಯಮನಮ್ಮ ಅವರ ಕುಟುಂಬವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಷ್ಟು ಸಬಲರಲ್ಲ. ಅವರ ಮಗ ಕೃಷ್ಣ ದಿನಗೂಲಿ ಕಾರ್ಮಿಕ.
ಜಿಲ್ಲಾ ಕೇಂದ್ರದಲ್ಲಿರುವ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್‌ಗಳು ಮತ್ತು ಸ್ಟ್ರೆಚರ್‌ಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯು ಸಾರ್ವಜನಿಕರು ಮತ್ತು ರೋಗಿಗಳ ಸಂಬಂಧಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳದ ಸಾಮಾಜಿಕ ಕಾರ್ಯಕರ್ತ ಲಿಂಗರಾಜ್ ಮಣ್ಣೂರ್, 'ಈ ಅಮಾನವೀಯ ಘಟನೆಯು ಆಸ್ಪತ್ರೆಯಲ್ಲಿನ ಕಳಪೆ ಪರಿಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಆಸ್ಪತ್ರೆಗೆ ಉತ್ತಮ ಮೂಲಸೌಕರ್ಯ ಮತ್ತು ನಿರ್ವಹಣೆಯ ಅಗತ್ಯವಿದೆ. ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಆದರೆ, ಅದಕ್ಕೆ ಅನುಗುಣವಾಗಿ ಸಿಬ್ಬಂದಿ ಇಲ್ಲ' ಎಂದು ಹೇಳಿದರು.
ಆದಾಗ್ಯೂ, ಆಸ್ಪತ್ರೆಯ ಅಧಿಕಾರಿಯೊಬ್ಬರು, 'ನಾವು ಅತ್ಯುತ್ತಮ ಸೇವೆಗಳನ್ನು ನೀಡುತ್ತಿದ್ದೇವೆ ಮತ್ತು ನಿರ್ಲಕ್ಷ್ಯದ ಪ್ರಶ್ನೆಯೇ ಇಲ್ಲ. ಈ ಸಂದರ್ಭದಲ್ಲಿ, ಯಮನಮ್ಮ ಅವರು ಹಠಾತ್ತನೆ ಪ್ರಜ್ಞೆ ತಪ್ಪಿದ್ದಪಿಂದಾಗಿ ಅವರ ಮಗ ತಕ್ಷಣವೇ ಅವರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದಿದ್ದಾರೆ' ಎಂದರು.
Advertisement