

ಬೆಳಗಾವಿ: ಆಳವಾದ ತಾಂತ್ರಿಕ ವಿಶ್ಲೇಷಣೆ, ಅಂತರರಾಷ್ಟ್ರೀಯ ಸಮನ್ವಯ ಮತ್ತು ಹೆಚ್ಚುವರಿ ಮಾನವಶಕ್ತಿಯ ಅಗತ್ಯವನ್ನು ಉಲ್ಲೇಖಿಸಿ ಬೆಳಗಾವಿ ನಗರ ಪೊಲೀಸರು ನಕಲಿ ಕಾಲ್ ಸೆಂಟರ್ ದಂಧೆ ಪ್ರಕರಣವನ್ನು ಬೆಂಗಳೂರಿನ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸಿದ್ದಾರೆ.
ಅಮೆರಿಕದ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಅಕ್ರಮ ಕಾಲ್ ಸೆಂಟರ್ ಅನ್ನು ಬೆಳಗಾವಿ ಪೊಲೀಸರು ಭೇದಿಸಿದ್ದರು.
ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಗುಪ್ತಚರ ಮಾಹಿತಿ ಮತ್ತು ಅನಾಮಧೇಯ ಸುಳಿವು ಹಿನ್ನೆಲೆಯಲ್ಲಿ ನವೆಂಬರ್ 11, 2025 ರಂದು ಪ್ರಕರಣ ದಾಖಲಾಗಿತ್ತು.
ಬೆಳಗಾವಿಯ ಸೈಬರ್ ಅಪರಾಧ ಪೊಲೀಸ್ ಠಾಣೆಯ ಎಎಸ್‌ಐ ಎಲ್.ಎಸ್. ಚಿನಗುಂಡಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ತನಿಖೆಯ ಸಮಯದಲ್ಲಿ, ಎಸಿಪಿ ರಘು ಜೆ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಬಿ.ಆರ್. ಗಡ್ಡೇಕರ್ ಮತ್ತು ಯು.ಎಸ್. ಅವತಿ ನೇತೃತ್ವದ ತಂಡವು ಬೆಳಗಾವಿಯ ಅಜಮ್ ನಗರ ವೃತ್ತದ ಬಳಿ ಇರುವ ಅಕ್ರಮ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿತ್ತು.
ಪ್ರಕರಣ ಸಂಬಂಧ 28 ಮಂದಿ ಪುರುಷರು, ಐವರು ಮಹಿಳೆಯರು ಸೇರಿದಂತೆ ಒಟ್ಟು 33 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, 6.5 ಲಕ್ಷ ರೂ. ಮೌಲ್ಯದ 37 ಲ್ಯಾಪ್‌ಟಾಪ್‌ಗಳು, 1.5 ಲಕ್ಷ ರೂ. ಮೌಲ್ಯದ 38 ಮೊಬೈಲ್ ಫೋನ್‌ಗಳು ಮತ್ತು 10,000 ರೂ. ಮೌಲ್ಯದ ಮೂರು ವೈ-ಫೈ ರೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ 33 ಜನರಲ್ಲಿ 28 ಮಂದಿಯನ್ನು ನವೆಂಬರ್ 12, 2025 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ ತನಿಖೆಯನ್ನು ಮುಂದುವರೆಸಿದ ಪೊಲೀಸರು ಇತ್ತೀಚೆಗೆ ಕುಮಾರ್ ಹಾಲ್‌ನ ಮಾಲೀಕ ಐಜಾಜ್ ಖಾನ್ ಮತ್ತು ತೌಸಿಫ್ ಮೊಹಮ್ಮದ್ ಸಬ್ ಶೇಖ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು.
ಶಂಕಿತರು VolP ಮೂಲಕ ಅಮೆರಿಕನ್ನರಿಗೆ ಕರೆ ಮಾಡಿ, ಗ್ರಾಹಕ ಸೇವೆ ಅಥವಾ ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ, 'ಪಾವತಿ' ಮಾಡದಿದ್ದರೆ ಬಂಧಿಸುವುದಾಗಿ ಅಥವಾ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ತಾಂತ್ರಿಕ ಪರೀಕ್ಷೆಯಲ್ಲಿ ಆರೋಪಿಗಳು 95 ಕ್ಕೂ ಹೆಚ್ಚು ಅಮೆರಿಕನ್ ನಾಗರಿಕರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ, ಪ್ರಕರಣದಲ್ಲಿ ವಿದೇಶಿ ಪ್ರಜೆಗಳು ಸಂತ್ರಸ್ತರಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆಗೆ ಇಂಟರ್‌ಪೋಲ್ ನೆರವು ಅಗತ್ಯವಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಂಡು, ಬೆಳಗಾವಿ ನಗರ ಪೊಲೀಸರು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲು ಮನವಿ ಮಾಡಿದ್ದು, ಬೆಂಗಳೂರಿನ ಡಿಜಿ ಮತ್ತು ಐಜಿಪಿ ಅವರು ಈ ವಿನಂತಿಯನ್ನು ಅನುಮೋದಿಸಿದ್ದಾರೆ.
Advertisement