

ಬೆಂಗಳೂರು: ಆಳಂದ ಮತದಾರರ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನವೆಂಬರ್ 12 ರಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಬಂಧನಕ್ಕೊಳಪಡಿಸಿದ ವ್ಯಕ್ತಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬಾಪಿ ಅದ್ಯಾ (27) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಆರೋಪಿಯನ್ನು ನಗರಕ್ಕೆ ತರಲಾಗಿದ್ದು, ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು 12 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಇದೀಗ ಎಸ್‌ಐಟಿ ಆರೋಪಿಗಳ ಡಿಜಿಟಲ್ ಸಾಧನಗಳನ್ನು ಪರಿಶೀಲನೆ ನಡೆಸುತ್ತಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸುತ್ತಿದೆ ಎಂದು ಮೂಲಗಳ ತಿಳಿಸಿವೆ.
2023ರ ವಿಧಾನಸಭಾ ಚುನಾವಣೆಗೂ ಮುನ್ನ 2022ರ ಡಿಸೆಂಬರ್ ಹಾಗೂ 2023ರ ಫೆಬ್ರವರಿ ತಿಂಗಳಲ್ಲಿ ಆಳಂದ ಕ್ಷೇತ್ರದ 6,018 ಮತಗಳ ರದ್ದತಿಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಕೆಯಾಗಿದ್ದವು. ಈ ಅರ್ಜಿಯನ್ನು ಸ್ಥಳೀಯರ ಹೆಸರಿನಲ್ಲಿ ಭರ್ತಿ ಮಾಡಿ ಕಾಲ್ ಸೆಂಟರ್‌ನ ಡೇಟಾ ಆಪರೇಟರ್‌ಗಳು ಸಲ್ಲಿಸಿದ್ದರು.
ಕಾಲ್ ಸೆಂಟರ್ ನಡೆಸುತ್ತಿದ್ದ ಕಲುಬರಗಿ ನಗರದ ಮೊಹಮ್ಮದ್ ಅಶ್ಫಾಕ್ ತಂಡಕ್ಕೆ ಪ್ರತಿ ಅರ್ಜಿಗೆ 80 ರು. ನಂತೆ 4.6 ಲಕ್ಷ ರು. ಪಾವತಿಯಾಗಿತ್ತು. ಇದರಲ್ಲಿ ಒಟಿಪಿ ಪಡೆಯಲು ತಲಾ ಒಟಿಪಿಗೆ 10 ರು. ನಂತೆ ಆದ್ಯನ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿತ್ತು ಎನ್ನಲಾಗಿದೆ.
ಚುನಾವಣಾ ಆಯೋಗಕ್ಕೆ ಮತ ರದ್ದತಿಗೆ ಅರ್ಜಿ ಸಲ್ಲಿಸುವ ಮುನ್ನ ಆಯೋಗದ ವೆಬ್‌ಸೈಟ್‌ನಲ್ಲಿ ಮೊಬೈಲ್ ಸಂಖ್ಯೆ ಕೊಟ್ಟು ನೋಂದಣಿ ಮಾಡಿಸಬೇಕಿತ್ತು. ಆಗ ಅರ್ಜಿ ಸಲ್ಲಿಸಿದರೆ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತಿತ್ತು. ಈ ಒಟಿಪಿ ಬಳಸಿದರೆ ವೆಬ್‌ಸೈಟ್‌ನಲ್ಲಿ ಮುಂದಿನ ಹಂತದ ಪ್ರಕ್ರಿಯೆ ನಡೆಸಲು ಪಾಸ್‌ವರ್ಡ್ ಸಿಗುತ್ತಿತ್ತು. ನಂತರ ಮತ ರದ್ದತಿ ಕುರಿತು ಅರ್ಜಿದಾರರು ಮಾಹಿತಿ ದಾಖಲು ಮಾಡಬೇಕಿತ್ತು. ಹೀಗೆ ಒಮ್ಮೆ ನೋಂದಣಿಯಾದರೆ ಪಾಸ್‌ವರ್ಡ್ ಬಳಸಿ ಹಲವು ಬಾರಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಮತ ಕಳವು ಆರೋಪ ಬಳಿಕ ಈ ವ್ಯವಸ್ಥೆಯನ್ನು ಚುನಾವಣಾ ಆಯೋಗ ಬದಲಾಯಿಸಿದೆ. ಈಗ ಮತ ರದ್ದತಿಗೆ ಪ್ರತಿ ಬಾರಿ ಅರ್ಜಿ ಸಲ್ಲಿಸುವಾಗಲೂ ಹೊಸದಾಗಿ ನೋಂದಣಿ ಮಾಡಬೇಕಿದೆ.
ಆಳಂದ ಕ್ಷೇತ್ರದಲ್ಲಿ ಮತ ರದ್ದು ಮಾಡಲು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ 75 ಮಂದಿ ಹೆಸರಿನಲ್ಲಿ ಆಶ್ಫಾಕ್ ತಂಡ ನೋಂದಣಿ ಮಾಡಿಸಿತ್ತು. ಈ 75 ಜನರ ಮೂಲಕವೇ 6 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಗ ಮೂಲ ಮತದಾರರ ಹೆಸರಲ್ಲಿ ಆದ್ಯ ನೀಡಿದ್ದ ಮೊಬೈಲ್ ಸಂಖ್ಯೆಗಳನ್ನು ಬಳಸಿ ಮತಕಳ್ಳರು ಒಟಿಪಿ ಪಡೆದಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ಅಕ್ರಮ್, ಅಶ್ಫಾಕ್, ನದೀಮ್ ಮತ್ತು ಮುಷ್ತಾಕ್ ಅವರ ಬ್ಯಾಂಕಿಂಗ್ ವಹಿವಾಟುಗಳ ಆಧಾರದ ಮೇಲೆ ಎಸ್ಐಟಿ ಆದ್ಯ ಅವರನ್ನು ಬಂಧಿಸಿದೆ.
ಮತಗಳ್ಳತನ ಪ್ರಕರಣ ಸಂಬಂಧ ಕಲುಬರಗಿ ನಗರದ ಕಾಲ್ ಸೆಂಟರ್ ಮಾಲೀಕ ಮೊಹಮ್ಮದ್ ಅಶ್ಫಾಕ್‌ನ ಆಪ್ತ ಮೊಹಮ್ಮದ್ ಅಕ್ರಂ ಸೇರಿ ಮೂವರನ್ನು ಎಸ್‌ಐಟಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು. ಅಲ್ಲದೆ, ಅಶ್ಫಾಕ್ ಹಾಗೂ ಆತನ ಸಹಚರರ ಮನೆಗಳ ಮೇಲೂ ದಾಳಿ ನಡೆಸಿ ಕೆಲ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು.
ಇನ್ನು ಈ ಅಕ್ರಮದ ಬಗ್ಗೆ ಪ್ರಕರಣ ದಾಖಲಾದ ಬಳಿಕ ದುಬೈಗೆ ಹಾರಿದ್ದ ಅಶ್ಫಾಕ್ ಕೊನೆಗೆ ಎಸ್‌ಐಟಿ ತನಿಖೆಗೆ ಭೀತಿಗೊಂಡು ಮರಳಿ ಶರಣಾಗಿದ್ದ. ಆಗ ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಒಟಿಪಿ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ ಮತದಾರರ ಕಳ್ಳತನದ ಆರೋಪದ ಮೇಲೆ ಚುನಾವಣಾ ಆಯೋಗದ ದೂರಿನ ಆಧಾರದ ಮೇಲೆ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ.
Advertisement