ಪ್ರೆಸ್ಟೀಜ್ ಫಾಲ್ಕನ್ ಸಿಟಿ: ಕಲುಷಿತ ನೀರಿನಿಂದ ಮಗು ಸಾವು, ಸೋಶಿಯಲ್ ಮೀಡಿಯಾದಲ್ಲಿ ವದಂತಿ, ಅಧಿಕಾರಿಗಳು ಹೇಳಿದ್ದೇನು?
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಕನಕಪುರ ಮುಖ್ಯ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿಯಲ್ಲಿ ಮಗುವಿನ ಸಾವಿಗೆ ಕಲುಷಿತ ನೀರಿನ ಸೇವನೆ ಅಥವಾ ಸೋಂಕು ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ. ಪಾಲಿಕೆ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಸದಸ್ಯರು ಮತ್ತು ವೈದ್ಯರು ಘಟನೆಯನ್ನು ಖಂಡಿಸಿದ್ದು, ಭೀತಿ ಹರಡಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ಮಧ್ಯೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ನೀರಿನ ಮಾದರಿಗಳನ್ನು ಸಂಗ್ರಹಿಸಿದರು. ಕಳೆದ ಮೂರು ವಾರಗಳಿಂದ ವರದಿಯಾದ ಕೆಲವು ಪ್ರಕರಣಗಳನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಸೋಂಕಿನಂತಹ ಪ್ರಕರಣ ಹರಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತಂಕಪಡುವ ಅಗತ್ಯವಿಲ್ಲ: ಕೆಲವು ವರದಿಗಳ ಹಿನ್ನೆಲೆಯಲ್ಲಿ ಮಾದರಿಗಳನ್ನು ಸಂಗ್ರಹಿಸಬೇಕಾಯಿತು. ಭಯಪಡುವ ಅಗತ್ಯವಿಲ್ಲ. ಮೂರು ವಾರಗಳ ಹಿಂದೆ ಕೆಲವು ಪ್ರಕರಣಗಳು ವರದಿಯಾದಾಗ ಪಾಲಿಕೆ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಸಂಪ್‌ಗಳು ಮತ್ತು ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛವಾಗಿಡಲು ನಿವಾಸಿಗಳಿಗೆ ನಿರ್ದೇಶನಗಳನ್ನು ನೀಡಿದ್ದಾರೆ. ಮರು ದೃಢೀಕರಣಕ್ಕಾಗಿ ಮಾದರಿಗಳನ್ನು ಸಂಗ್ರಹಿಸಿದ್ದೇವೆ ಎಂದು ಕೆಎಸ್‌ಪಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಿಮ್ಮಿಂಗ್ ಪೂಲ್, ಹೋಟೆಲ್ ಬಂದ್: 80 ಓವರ್‌ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ. ತದನಂತರ ಅಸೋಸಿಯೇಷನ್ 8 ದಿನಗಳ ಹಿಂದೆ ಈಜುಕೊಳವನ್ನು ಬಂದ್ ಮಾಡಿದೆ. ನಾಲ್ಕು ದಿನಗಳ ಹಿಂದೆ ಆವರಣದೊಳಗಿನ ಹೋಟೆಲ್ ಅನ್ನು ಸುರಕ್ಷತೆಗಾಗಿ ಮುಚ್ಚಿರುವುದಾಗಿ ಅಸೋಸಿಯೇಷನ್ ಹೇಳಿದೆ. ಈ ಹಿಂದೆ ಪರೀಕ್ಷಿಸಿದ ನೀರಿನ ಮಾದರಿಗಳಲ್ಲಿ ನೆಗೆಟಿವ್ ಕಂಡುಬಂದಿದೆ. ಒಂದು ಅಥವಾ ಎರಡು ಪ್ರಕರಣಗಳಲ್ಲಿ ಮಲ ಪರೀಕ್ಷೆಗಳಲ್ಲಿ ಆಹಾರಕ್ಕೆ ಸಂಬಂಧಿಸಿದ E Coli ಮತ್ತು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಕಂಡುಬಂದಿದೆ.
ಕಾಯಿಲೆಯಿಂದ ಮಗು ಸಾವು: ದೀರ್ಘಕಾಲದ ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳಿಂದ "8 ವರ್ಷದ ಮಗು ಸಾವನ್ನಪ್ಪಿದೆ. ಕೆಲವರು ಇದನ್ನು ಕಲುಷಿತ ನೀರಿನಿಂದ ಬಂದಿದೆ ಎಂದು ಹೇಳುತ್ತಿದ್ದಾರೆ. ಅಂತಹ ಸುದ್ದಿ ಹಬ್ಬಿಸುವುದರ ಹಿಂದೆ ಕೆಲವು ಅಜೆಂಡಾ ಇದೆ ಎಂಬುದು ತೋರುತ್ತದೆ ಎಂದು ಸಂಘದ ಸದಸ್ಯರೊಬ್ಬರು ಹೇಳಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಬಾಲಸುಂದರ್ ಮಾತನಾಡಿ, ಅಪಾರ್ಟ್ ಮೆಂಟ್ ಆವರಣದಲ್ಲಿ ಅಂತಹ ಯಾವುದೇ ಸೋಂಕು ಕಂಡುಬಂದಿಲ್ಲ. ಕಳೆದ ಕೆಲವು ವಾರಗಳಿಂದ ವೈದ್ಯಕೀಯ ತಂಡವನ್ನು ನಿಯೋಜಿಸಿದ್ದು, ನಿವಾಸಿಗಳ ಆರೋಗ್ಯವನ್ನು ಪರಿಶೀಲಿಸುತ್ತಿದ್ದೇವೆ. ಮಾದರಿಗಳಲ್ಲಿ ನೆಗೆಟಿವ್ ಬಂದಿದೆ. ಮಗುವಿನ ಸಾವು ನೀರಿನಿಂದಾಗಿಲ್ಲ. ಇದು ಕೇವಲ ಕಾಕತಾಳೀಯ. ಕೆಲವರು ಭಯ ಹಬ್ಬಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.
ಕೆಲವರು ಬೇಕೆಂತಲೆ ಇಂತಹ ಸುಳ್ಳು ಸುದ್ದಿ: ಕಳೆದ ಒಂದು ತಿಂಗಳಿನಿಂದ ಆಗಾಗ ಕೆಲವು ಬೇಧಿ ಪ್ರಕರಣಗಳು ಕಂಡುಬಂದಿವೆ. ಆದಾಗ್ಯೂ, ಯಾರೂ ಕೂಡಾ ಆಸ್ಪತ್ರೆಗೆ ದಾಖಲಾಗಿಲ್ಲ ಅಥವಾ ಗಂಭೀರ ಪ್ರಕರಣಗಳು ವರದಿಯಾಗಿಲ್ಲ. ಕೆಲವರು ಬೇಕೆಂತಲೆ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದರು.
ಈ ಮಧ್ಯೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದರ್ಶನ್, ಮಂಡಳಿಯ ಪೈಪ್‌ಲೈನ್‌ನಿಂದ ಯಾವುದೇ ಸೋಂಕು ಉಂಟಾಗಿಲ್ಲ.“ಪ್ರತಿ ಮೂರು ದಿನಗಳಿಗೊಮ್ಮೆ ಮಾರ್ಗಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮ ಪೈಪ್‌ಲೈನ್ ಜಾಲದಲ್ಲಿ ಯಾವುದೇ ಮಾಲಿನ್ಯ ಕಂಡುಬಂದಿಲ್ಲ ಎಂದು ಹೇಳಿದರು.


