
ನವದೆಹಲಿ: ವಿಜಯದಶಮಿ ಹಬ್ಬವಾದ ಇಂದು (ಗುರುವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯಾಗಿ 100 ವರ್ಷ ಪೂರೈಸಿದ್ದು, ಈ ನಡುವೆ ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ ಎಂದು ಬಿಜೆಪಿ ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಷ್ಟೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ. 1925 ರ ವಿಜಯದಶಮಿಯಂದು ಆರಂಭಗೊಂಡ ಆರ್‌ಎಸ್‌ಎಸ್‌ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ ಎಂದು ಹೇಳಿದೆ.
ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ಸಂಘ ಸ್ಥಾಪನಾ ದಿನ ಮತ್ತು ಸಂಘ ಶತಾಬ್ದಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದೆ.
ಸಂಸದ ತೇಜಸ್ವಿ ಸೂರ್ಯ ಅವರು ಪೋಸ್ಟ್ ಮಾಡಿ,. 100 ವರ್ಷಗಳ ಸೇವೆ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ,ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ವು, ಸ್ಥಾಪನೆಯಾದಾಗಿನಿಂದ 100 ವರ್ಷಗಳ ಈ ಹೆಮ್ಮೆಯ ಪಯಣದಲ್ಲಿ, ಸಂಘವು ಭಾರತೀಯ ಮೌಲ್ಯಗಳ ಆಧಾರದ ಮೇಲೆ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ನಿರಂತರವಾಗಿ ದುಡಿದಿದೆ. ಕೋಟ್ಯಂತರ ಸ್ವಯಂಸೇವಕರ ನಿಸ್ವಾರ್ಥ ಸೇವೆಗೆ ನಮ್ಮ ನಮನಗಳು ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಎಲ್ಲ ಸ್ವಯಂಸೇವಕರಿಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ಸಂಸ್ಥಾಪನಾ ದಿವಸದ ಹೆಮ್ಮೆಯ ಶುಭಾಶಯಗಳು. 1925ರಲ್ಲಿ ನಾಗಪುರದಲ್ಲಿ ವಿಜಯದಶಮಿಯ ಶುಭದಿನದಂದು ಪರಮಪೂಜ್ಯ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರು ಸ್ಥಾಪಿಸಿದ ಆರ್.ಎಸ್.ಎಸ್ ಈ 100 ವರ್ಷಗಳಲ್ಲಿ ನಿರಂತರ ದೇಶಸೇವೆಯಲ್ಲಿ ನಿರತವಾಗಿದೆ.
ದೇಶಕ್ಕೆ ನೂರಾರು ಮುಂಚೂಣಿ ನಾಯಕರನ್ನು, ರಾಷ್ಟ್ರ ಭಕ್ತ ಸೇನಾನಿಗಳನ್ನು ಕೊಡಮಾಡುವ ಮೂಲಕ ಭಾರತವನ್ನು ಕಟ್ಟುತ್ತಾ, ಭಾರತಾಂಬೆಯ ಮಡಿಲಲ್ಲಿ ಈ ದೇಶ ಸುಭದ್ರವಾಗಿರಿಸಿ, ಭಾರತಾಂಬೆಯ ಕೀರ್ತಿ ಪತಾಕೆ ವಿಶ್ವದೆಲ್ಲೆಡೆ ಪಸರಿಸಬೇಕೆಂಬ ಪರಮ ಧ್ಯೇಯ ತೊಟ್ಟು ಮುನ್ನಡೆಯುತ್ತಿರುವ ಆರ್‌ಎಸ್‌ಎಸ್ ಸೂರ್ಯ-ಚಂದ್ರರಿರುವ ತನಕ, ಭಾರತದ ಅಸ್ತಿತ್ವ ಇರುವವರೆಗೂ ಶಾಶ್ವತವಾಗಿ ಬಾನೆತ್ತರದಲ್ಲಿ ಮಿನುಗಲಿದೆ, ನೈಜ ಭಾರತೀಯತೆಯನ್ನು ವಿಶ್ವ ಭೂಪಟದಲ್ಲಿ ವಿಸ್ತರಿಸಲಿದೆ ಎಂದು ತಿಳಿಸಿದ್ದಾರೆ.
ಸಿಟಿ ರವಿ ಅವರು ಪೋಸ್ಟ್ ಮಾಡಿ, ಸಂಘದ ಸಂಸ್ಕೃತಿ ಕೇವಲ ಮನುಷ್ಯರನ್ನು ಮಾತ್ರವಲ್ಲ, ಇಡೀ ಚರಾಚರ ಸೃಷ್ಟಿಯನ್ನೇ ಆತ್ಮವತ್ ಕಾಣುವಷ್ಟು ವಿಶಾಲವಾದುದು. 'ಸ್ವಯಂ ಜೀವಿಸಿ, ಇತರರನ್ನೂ ಬದುಕಲು ಬಿಡಿ' ಎಂಬ ನೀತಿಯು ನಮ್ಮದು. ನೂರಾರು ವರ್ಷಗಳ ಹಿಂದೆ ಜ್ಞಾನವಿರಲಿಲ್ಲ, ಈಗಷ್ಟೇ ಹೊಸ ಜ್ಞಾನ ಬಂತು ಎಂದು ಭಾವಿಸುವುದು ನಮ್ಮ ಭವ್ಯ ಸಂಸ್ಕೃತಿಯ ನಾಶಕ್ಕೆ ಕಾರಣವಾಗುತ್ತದೆ. ಈ ಪ್ರವೃತ್ತಿ ವಿರುದ್ಧ ಎಚ್ಚರಿಸಲು ಆರ್‌ಎಸ್‌ಎಸ್ ಸೃಷ್ಟಿಯಾಯಿತು ಎಂದು ಹೇಳಿದ್ದಾರೆ.
Advertisement