
ಬೆಂಗಳೂರು: ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನೈಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವ ಪರಂಪರೆಯ ವಿರಾಟ್ ಅನಾವರಣ ಎಂದು ಹೇಳುವ ಮೂಲಕ ಕಾಂತಾರ ಚಾಪ್ಟರ್ 1 ಚಿತ್ರವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಕೊಂಡಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನವದೆಹಲಿಯಲ್ಲಿ ನಾನು, ನನ್ನ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಕಾಂತಾರ ಚಾಪ್ಟರ್ 1 ಚಿತ್ರ ವೀಕ್ಷಿಸಿದೆವು. ಚಿತ್ರದಲ್ಲಿ ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನೈಜ ಹೂರಣ. ಈ ಚಿತ್ರವು ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ, ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವ ಪರಂಪರೆಯ ವಿರಾಟ್ ಅನಾವರಣಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ನಿರ್ದೇಶಕ ರಿಷಭ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಹೊಂಬಾಳೆ ಫಿಲಂಸ್ ಮತ್ತವರ ತಂಡದ ಪ್ರಯತ್ನಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಅತ್ಯುತ್ತಮ ಚಿತ್ರಗಳು ಮೂಡಿಬರಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಇಂತಹ ಜಾಗತಿಕ ಮಟ್ಟದ ಚಿತ್ರಗಳು ಹೆಚ್ಚೆಚ್ಚು ಬರಲಿ ಎಂದು ಆಶಿಸುವೆ ಎಂದು ಹಾರೈಸಿದ್ದಾರೆ.
ಕುಮಾರಸ್ವಾಮಿಯವರ ಈ ಪ್ರತಿಕ್ರಿಯೆ ರಿಷಬ್ ಶೆಟ್ಟಿಯವರೂ ಪ್ರತಿಕ್ರಿಯೆ ನೀಡಿದ್ದು, ಧನ್ಯವಾದಗಳು ಕುಮಾರಣ್ಣ ಎಂದು ಹೇಳಿದ್ದಾರೆ.
Advertisement