

ಬೆಳಗಾವಿ: ಪ್ರಿಯಕರನೊಂದಿಗೆ ತನ್ನ ಮಗಳು ಪರಾರಿಯಾದಳು ಎಂಬ ಕೋಪದಿಂದ ವ್ಯಕ್ತಿಯೋರ್ವ ಆಕೆಯ ಅಂತಿಮ ವಿಧಿವಿಧಾನ ನೆರವೇರಿಸಿ ಇಡೀ ಗ್ರಾಮಕ್ಕೆ ತಿಥಿ ಊಟ ಹಾಕಿಸಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.
ಬೆಳಗಾವಿಯ ರಾಯಭಾಗದ ನಾಗರಾಳ ಗ್ರಾಮದಲ್ಲಿ ಈ ವಿಚಿತ್ರ ಘಟನೆ ವರದಿಯಾಗಿದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಓಡಿಹೋದ ಮಗಳ ತಿಥಿ ಮಾಡಿದ ವ್ಯಕ್ತಿಯೊಬ್ಬರು, ಇಡೀ ಊರಿಗೆ ಊಟ ಹಾಕಿಸಿದ ಘಟನೆ ನಡೆದಿದೆ. ಮಗಳು ತಮ್ಮ ಪಾಲಿಗೆ ಸತ್ತು ಹೋದಳೆಂದು ತಂದೆ ಇಡೀ ಊರಿಗೆ ತಿಥಿ ಊಟ ಹಾಕಿಸಿದ್ದಾರೆ.
ನಾಗರಾಳ ಗ್ರಾಮದ ಶಿವಗೌಡ ಎಂಬವರ ಮಗಳು ಅದೇ ಗ್ರಾಮದ ವಿಠ್ಠಲ್ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಪೋಷಕರಿಗೆ ಈ ಬಗ್ಗೆ ಸಮ್ಮತಿ ಇರಲಿಲ್ಲ. ಇಂಥ ಸಂದರ್ಭದಲ್ಲೇ ಶಿವಗೌಡ ಮಗಳು ವಿಠ್ಠಲ್ ಬಸ್ತವಾಡೆ ಜತೆ ಪರಾರಿಯಾಗಿದ್ದಾಳೆ. ಮೊದಲಿಗೆ ಶಿವಗೌಡ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ನಂತರ, ಮಗಳು ಪ್ರೀತಿಸಿದ ಯುವಕನ ಜತೆ ಓಡಿಹೋಗಿರುವುದು ಗೊತ್ತಾಗಿದೆ. ಇದರಿಂದ ಮನನೊಂದ ಅವರು ಮಗಳು ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ತಿಥಿ ಮಾಡಿದ್ದಾರೆ.
ಮೂಲಗಳ ಪ್ರಕಾರ ಶಿವಗೌಡಗೆ ನಾಲ್ಕು ಜನ ಹೆಣ್ಣುಮಕ್ಕಳಿದ್ದು, ಈ ಪೈಕಿ ಈಗ ಓಡಿಹೋದವಳು ಕೊನೆಯವಳಾಗಿದ್ದಳು. ಮಗಳು ಮನೆತನದ ಸಂಸ್ಕಾರ ಮುರಿದು ಓಡಿಹೋಗಿದ್ದರಿಂದ ಮನನೊಂದಿರುವ ಶಿವಗೌಡ ಪಾಟೀಲ್, ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿದ್ದಾರೆ.
ಮಾತ್ರವಲ್ಲದೇ ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಸಿ ತಿಥಿ ಊಟ ಹಾಕಿಸಿದ್ದಾರೆ. ಅಷ್ಟೇ ಅಲ್ಲದೆ, ಮಗಳ ಫೋಟೊ ಹಾಕಿ ಊರ ತುಂಬ ಶ್ರದ್ಧಾಂಜಲಿ ಬ್ಯಾನರ್ಗಳನ್ನೂ ಹಾಕಿಸಿದ್ದಾರೆ.
Advertisement