

ಹಾಸನ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಇದೇ ಕೊನೆ.. ಆ ಮೇಲೆ ಇನ್ನೆಂದೂ ಅಧಿಕಾರಕ್ಕೆ ಬರಲ್ಲ ಎಂದು ಬ್ರಹ್ಮಾಂಡ ಗುರೂಜಿ ಅಲಿಯಾಸ್ ನರೇಂದ್ರ ಬಾಬು ಶರ್ಮಾ ಅವರು ಭವಿಷ್ಯ ನುಡಿದಿದ್ದಾರೆ.
ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಾಜಕೀಯ ಕುರಿತು ಭವಿಷ್ಯ ನುಡಿದಿದ್ದು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
'ಎಲ್ಲಾ ರಾಜಕೀಯದವರು ಗೊಂದಲದಲ್ಲಿ ಸಿಲುಕಲಿದ್ದು ಬಹಳಷ್ಟು ಜನ ಕಿತ್ತಾಡುತ್ತಾರೆ. ಸ್ಥಾನ ಪಲ್ಲಟ ಮಾಡಿಕೊಳ್ಳಲಿದ್ದಾರೆ. ಇಡೀ ಜಗತ್ತಿನ ಇತಿಹಾಸ ಪುಟದಲ್ಲಿ ಕರ್ನಾಟಕ ರಾಜ್ಯ ಅಧಿಕಾರದ ಕುರ್ಚಿಗಾಗಿ ಬಡಿದಾಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗುತ್ತೆ.
ಸಂಕ್ರಾಂತಿ ಒಳಗಡೆ ಕೇತು ಮತ್ತು ಸೂರ್ಯ ರಾಹು ಜೊತೆಗೆ ಜರುಗಲಿದ್ದು ಬಹಳ ದೊಡ್ಡ ಗಲಾಟೆಗಳು ನಡೆಯುತ್ತವೆ. ಇದರ ಜೊತೆಗೆ ಸ್ಥಾನ ಪಲ್ಲಟ, ಪಕ್ಷಪಾತ, ಭೇದ ಭಾವ ಆಗಲಿದೆ. ರಾಜಕೀಯದವರು ಇನ್ಮೇಲೆ ಹಿಟ್ಲರ್ ರೂಲ್ ತರಲಿದ್ದಾರೆ. ಸಿದ್ದರಾಮಯ್ಯ ಅವರು ಆರೋಗ್ಯ ಕ್ಷೀಣಿಸದಂತೆ ನೋಡಿಕೊಳ್ಳಬೇಕು. ಅಲ್ಲದೇ ಕಾಂಗ್ರೆಸ್ ಅಧಿಕಾರ ಅವಧಿ ಇದೇ ಕೊನೆ, ಮುಂದೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ ಎಂದರು.
ಕರ್ನಾಟಕ 3 ಭಾಗ, ಭಾರತ 2 ಭಾಗ
'ಇದು ಕೊನೆಯ ಹಂತ, ಮುಂದಿನ ದಿನಗಳಲ್ಲಿ ಪ್ರಳಯ ಆಗುತ್ತೆ. ಉತ್ತರ ಭಾರತ, ಉತ್ತರ ಕರ್ನಾಟಕ ಭಾಗ ಮುಳುಗಡೆ ಆಗಲಿವೆ. ಕರ್ನಾಟಕ ಮೂರು ಭಾಗ, ಭಾರತ ದೇಶ ಎರಡು ಭಾಗ ಆಗುತ್ತದೆ. ಇದಕ್ಕೆಲ್ಲ ಮುನ್ಸೂಚನೆಯಾಗಿದೆ ಇದೇ ಕೊನೆಯ ವಿಶೇಷವಾದ ಸಂದರ್ಭವಾಗಿದ್ದು ಮುಂದೆ ಆಗುವ ಉಗ್ರಸ್ವರೂಪದ ಬಗ್ಗೆ ತಾಯಿ ಸೂಚನೆ ಕೊಟ್ಟಿದ್ದಾಳೆ ಎಂದಿದ್ದಾರೆ.
ಅಲ್ಲದೆ ಜನರು ಆರೋಗ್ಯ ನೋಡಿಕೊಳ್ಳಬೇಕು. ಜಲಗಂಡಾಂತರ ಸಂಭವಿಸಲಿದ್ದು, ಘಟಪ್ರಭ, ಮಲಪ್ರಭಾ, ಗೋದಾವರಿ ನದಿಗಳು ದೇಶ ಎರಡು ಭಾಗ ಮಾಡುವಷ್ಟು ತುಂಬುತ್ತೆ ಎಂದು ಹೇಳಿದರು.
ಪ್ರಧಾನಿ ಮೋದಿ ದೇಶದ ರಕ್ಷಾ ಕವಚ
75 ವರ್ಷ ತುಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ. ಮೋದಿ ಅವರು ದೇಶದ ರಕ್ಷಾ ಕವಚವಾ ಆಗಿದ್ದಾರೆ. ಮುಂದೆ ಒಬ್ಬ ಸನ್ಯಾಸಿ ದೇಶದ ಪ್ರಧಾನಿ ಆಗಲಿದ್ದು, ದೇಶದ ಚುಕ್ಕಾಣಿ ಹಿಡಿಯುತ್ತಾರೆ. ಬ್ರಹ್ಮಚಾರಿ ಪ್ರಧಾನಿ ಆಗದಿದ್ದರೆ ಇಡೀ ಜಗತ್ತಿಗೆ ಶನಿ ಪ್ರವೇಶ ಆಗುತ್ತೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದರು.
Advertisement