
ಬೆಂಗಳೂರು: ಗುಡುಗು ಸಹಿತ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಜಲಾವೃತವಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ರೇನ್‌ಬೋ ಲೇಔಟ್, ಪಯೋನೀರ್ ಲೇಕ್ ರೆಸಿಡೆನ್ಸಿ ಮತ್ತು ಆನೇಕಲ್ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀಲಾದ್ರಿ ನಗರ (ಎಲೆಕ್ಟ್ರಾನಿಕ್ ಸಿಟಿ), ಇಂದಿರಾನಗರ, ಎಚ್‌ಎಸ್‌ಆರ್ ಲೇಔಟ್ ಮತ್ತು ನಗರದ ಅತ್ಯಂತ ಜನನಿಬಿಡ ಐಟಿ ಕಾರಿಡಾರ್‌ಗಳಲ್ಲಿ ಒಂದಾದ ಹೊರ ವರ್ತುಲ ರಸ್ತೆಯುದ್ದಕ್ಕೂ ನೀರು ನಿಂತದ್ದು ವರದಿಯಾಗಿದೆ. ಹಲವೆಡೆ ಮೊಣಕಾಲು ಉದ್ದದ ನೀರಿನಲ್ಲಿ ವಾಹನಗಳು ಸಂಚರಿಸುತ್ತಿದದ್ದು ಕಂಡುಬಂದಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ನಿನ್ನೆ ರಾತ್ರಿ ಭಾರಿ ಮಳೆಯಾಗಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ, ಯಾವುದೇ ಪ್ರಮುಖ ಹಾನಿಯ ಘಟನೆಗಳು ವರದಿಯಾಗಿಲ್ಲ, ಆದರೆ, ಕೆಲವು ಭಾಗಗಳಲ್ಲಿ ಜಲಾವೃತವಾಗಿರುವ ವರದಿಗಳಿವೆ. ನಮ್ಮ ಅಧಿಕಾರಿಗಳು ತ್ವರಿತಗತಿಯ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅವರು ತಿಳಿಸಿದರು.
ಬಸವೇಶ್ವರನಗರದ 3ನೇ ಬ್ಲಾಕ್‌ನಲ್ಲಿ ಶುಕ್ರವಾರ ರಾತ್ರಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ನಿಂತಿದ್ದ ಎರಡು ವಾಹನಗಳಿಗೆ ಹಾನಿಯಾಗಿದೆ. ಆದಾಗ್ಯೂ, ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನೆರೆಯ ಜಿಲ್ಲೆಗಳಲ್ಲೂ ರಾತ್ರಿಯಿಡಿ ವ್ಯಾಪಕ ಮಳೆಯಾಗಿದೆ.
ಇಂದಿನ ಹವಾಮಾನ ವರದಿ: ಇಂದು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯೊಂದಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ.
ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ.
ಅಧಿಕ ಮಳೆಯಾದ ಪ್ರದೇಶಗಳು:
ಅಕ್ಟೋಬರ್ 10 ರಂದು ಬೆಳಿಗ್ಗೆ 8.30 ರಿಂದ ಅಕ್ಟೋಬರ್ 11 ರ ಬೆಳಿಗ್ಗೆ 5.30 ರ ನಡುವೆ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಗುಡುಗು ಸಹಿತ 20.7 ಮಿಮೀ ಮಳೆ ದಾಖಲಾಗಿದ್ದರೆ, ಬೆಂಗಳೂರು ನಗರ ವೀಕ್ಷಣಾಲಯದಲ್ಲಿ 67.1 ಮಿಮೀ ಮಳೆ ದಾಖಲಾಗಿದೆ. ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) 53 ಮಿಮೀ, ಹೆಸರಘಟ್ಟ (ಬೆಂಗಳೂರು ಗ್ರಾಮಾಂತರ) 14.5 ಮಿಮೀ, ಚಂದೂರಾಯನಹಳ್ಳಿ (ರಾಮನಗರ) 19.5 ಮಿಮೀ, ಚಿಕ್ಕಬಳ್ಳಾಪುರ 12.5 ಮಿಮೀ, ಹುಣಸೂರು (ಮೈಸೂರು) 8.5 ಮಿಮೀ, ಟಮಕಾದಲ್ಲಿ 3.2 ಮಿಲಿ ಮೀಟರ್ , ಗೋಪಾಲ್ ನಗರ (ಬೆಂಗಳೂರು ನಗರ) 10 ಮಿ. ಮೀ ಮಳೆಯಾಗಿದೆ.
ಕಡಿಮೆ ಮಳೆಯಾದ ಪ್ರದೇಶಗಳು: ಹಾಸನದಲ್ಲಿ 0.5 ಮಿ.ಮೀ, ಮೂಡಿಗೆರೆ (ಚಿಕ್ಕಮಗಳೂರು) 0.5 ಮಿ.ಮೀ, ಹಿರಿಯೂರು (ಚಿತ್ರದುರ್ಗ) 2 ಮಿ.ಮೀ, ಮತ್ತು ಗೋಣಿಕೊಪ್ಪಲು (ಕೊಡಗು) 1.5 ಮಿ.ಮೀ ಕಡಿಮೆ ಮಳೆಯಾಗಿದೆ
Advertisement