
ಚಿತ್ರದುರ್ಗ: ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ಭರ್ತಿಯಾಗಿ ಕೋಡಿ ಬೀಳಲು ಕೇವಲ 1 ಅಡಿ ನೀರು ಮಾತ್ರ ಬಾಕಿಯಿದೆ. ಈ ಬೆಳವಣಿಗೆ ರೈತರ ಮುಖದಲ್ಲಿ ಸಂತಸ ತರಿಸಿದೆ.
ಜಲಾಶಯದ ಪೂರ್ಣ ಸಾಮರ್ಥ್ಯ 130 ಅಡಿಗಳಷ್ಟಿದ್ದು, ಈಗಾಗಲೇ 129.40 ಅಡಿಗಳಷ್ಟು ನೀರು ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ವಿವಿ ಸಾಗರ ಡ್ಯಾಂ ಕೂಡ ಒಂದಾಗಿದೆ. 1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸವಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ.
ಬರಗಾಲದ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಚಿತ್ರದುರ್ಗ ಹಾಗೂ ಹಿರಿಯೂರು ಭಾಗಕ್ಕೆ ವಿವಿ ಸಾಗರ ಜಲಾಶಯವೇ ಆಧಾರಸ್ಥoಭವಾಗಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಂತಹ ಸ್ಥಿತಿಯಲ್ಲಿ ಮೈಸೂರು ಮಹಾರಾಜರು ತಾಲೂಕಿನ ಮಾರಿಕಣಿವೆ ಬಳಿ 1907 ರಲ್ಲಿ ಜಲಾಶಯ ನಿರ್ಮಿಸಿದ್ದರು. ಅಂದಿನಿಂದ ಇದು ಆರನೇ ಬಾರಿ ಅಣೆಕಟ್ಟು ಪೂರ್ಣ ಸಾಮರ್ಥ್ಯವನ್ನು ತಲುಪುತ್ತಿದೆ. ಈ ಹಿಂದೆ 1933 ರಲ್ಲಿ ಅಣೆಕಟ್ಟು ತುಂಬಿ ಹರಿದಿತ್ತು.
ಈ ಅಣೆಕಟ್ಟು ಕಾಲುವೆಗಳ ಮೂಲಕ ಹಿರಿಯೂರು ತಾಲ್ಲೂಕಿನ ಒಂದು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ ಮತ್ತು ಹಿರಿಯೂರು, ಹೊಸದುರ್ಗ, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.
ಅಣೆಕಟ್ಟಿನ ಪೂರ್ಣ ಜಲಾಶಯದ ಮಟ್ಟ (FRL) 130 ಅಡಿಗಳಿದ್ದರೂ, ಅಳತೆಗಳು 135 ಅಡಿಗಳನ್ನು ತಲುಪಬಹುದು. ಅಣೆಕಟ್ಟು 1932, 1933, 1934, 1956, 1957, 1958, 2000, 2021 ಮತ್ತು 2022, 2024 ಮತ್ತು ಈಗ ಸೇರಿದಂತೆ ಹಲವು ಬಾರಿ 120 ಅಡಿಗಳನ್ನು ಮೀರಿದೆ. ತೀವ್ರ ಬರಗಾಲದಿಂದಾಗಿ 2017 ರಲ್ಲಿ ಅಣೆಕಟ್ಟು ಡೆಡ್ ಸ್ಟೋರೇಜ್ ಅನ್ನು ಎದುರಿಸಿತ್ತು. ಇದೀಗ ಡ್ಯಾಂ ಭರ್ತಿಯಾಗುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಬೇರೆ ಯಾವುದೇ ನೀರಿನ ಮೂಲಗಳಿಲ್ಲದ ಕಾರಣ ಚಿತ್ರದುರ್ಗದ ಜನರು ವಿವಿ ಸಾಗರವನ್ನು ಅವಲಂಬಿಸಿದ್ದಾರೆ. ಅಣೆಕಟ್ಟಿನಲ್ಲಿನ ನೀರು ಕೃಷಿಗೆ ಮತ್ತು ಗೃಹಬಳಕೆಗೆ ಸಹಾಯ ಮಾಡುತ್ತದೆ. ವಿವಿ ಸಾಗರ ಜಲಾಶಯವನ್ನು ಅವಲಂಬಿಸಿರುವ ರೈತರು ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ರೈತ ನಾಯಕ ಎಚಘಟ್ಟ ಸಿದ್ದವೀರಪ್ಪ ಅವರು ಹೇಳಿದ್ದಾರೆ.
Advertisement