RSS ಚುಟುವಟಿಕೆಗೆ ನಿಷೇಧ: ತಮಿಳುನಾಡು ನೀತಿ ಅಧ್ಯಯನಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಆರ್‌ಎಸ್‌ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದಾರೆ.
CM Siddaramaiah, DCM Dk Shivakuar casual Images
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ತಮಿಳುನಾಡು ಸರ್ಕಾರದ ನೀತಿಗಳನ್ನು ಅಧ್ಯಯನ ಮಾಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸೂಚನೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆದಿದ್ದಾರೆ. ಸರ್ಕಾರಿ ಸ್ಥಳದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ರಾಜ್ಯದ ಕ್ರಮವನ್ನು ಪರಿಗಣಿಸಿ, ಪರಿಶೀಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆಂದು ಹೇಳಿದರು.

ವಾಲ್ಮೀಕಿ ಸಮಾಜದವರಿಗೆ ಸಚಿವ ಸ್ಥಾನ ನೀಡಲಾಗುವುದೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಶಾಸಕರು ರಾಜೀನಾಮೆ ನೀಡಿದ್ದು, ಸರ್ಕಾರ ಅವರನ್ನು ತೆಗೆದುಹಾಕಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಂಭಾವ್ಯ ಸಂಪುಟ ಪುನರ್ರಚನೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂತಹ ವಿಷಯಗಳಲ್ಲಿ ಪಕ್ಷದ ಶಾಸಕರ ಅಭಿಪ್ರಾಯ ಮತ್ತು ಹೈಕಮಾಂಡ್ ನಿರ್ಧಾರವು ನಿರ್ಣಾಯಕವಾಗಿದೆ. ಸಚಿವ ಸಂಪುಟ ಪುನರ್ರಚನೆಗೂ (ಸೋಮವಾರ ಸಚಿವರೊಂದಿಗೆ) ಔತಣಕೂಟಕ್ಕೂ ಯಾವುದೇ ಸಂಬಂಧವಿಲ್ಲ. ನವೆಂಬರ್‌ನಲ್ಲಿ ಯಾವುದೇ ಕ್ರಾಂತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ನಡೆದ 'ಬೆಂಗಳೂರು ನಡಿಗೆ' ಕಾರ್ಯಕ್ರಮದ ಸಂದರ್ಭದಲ್ಲಿ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ನಡೆದ ಹೈ ಡ್ರಾಮಾ ಕುರಿತು ಪ್ರತಿಕ್ರಿಯಿಸಿ, ಶಾಸಕ ಮುನಿರತ್ನರವರು ವೇದಿಕೆಗೆ ಆಗಮಿಸಿ, ತಮ್ಮ ಅಭಿಪ್ರಾಯವನ್ನು ನೀಡಬಹುದಾಗಿತ್ತು. ಆದರೆ ಶಾಸಕರು ತಮ್ಮ ಅಭಿಪ್ರಾಯವನ್ನು ತಿಳಿಸಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನವಿತ್ತೇ ಇಲ್ಲವೇ ಎಂಬ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ ಎಂದು ಹೇಳಿದರು.

CM Siddaramaiah, DCM Dk Shivakuar casual Images
CM ಸಿದ್ದರಾಮಯ್ಯ, DCM ಡಿಕೆ ಶಿವಕುಮಾರ್ ಗೆ ಬಾಂಬ್ ಬೆದರಿಕೆ

ಇದೇ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3 ಅನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪುನರುಚ್ಚರಿಸಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನ್ಹಟ್ಟಿ ತಾಲ್ಲೂಕಿನ ಬಂಡಿಗಣಿ ಮಠದಲ್ಲಿ ಸರ್ವಧರ್ಮ ಮಹಾಸಂಗಮ (ಧಾರ್ಮಿಕ ಸಾಮರಸ್ಯ) ಸಮ್ಮೇಳನದಲ್ಲಿ ಭಾಗವಹಿಸಿದ ಮಾತನಾಡಿದ ಸಿಎಂ, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆಗೆ ವಿಷಾದ ವ್ಯಕ್ತಪಡಿಸಿದರು.

ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು, ಎಲ್ಲರ ನೆಮ್ಮದಿಯ ಉದ್ಯಾನವಾಗಬೇಕು. ಜನರಲ್ಲಿ ಪರಸ್ಪರ ಪ್ರೀತಿಯಿರಬೇಕು. ಸರ್ವ ಧರ್ಮ ಮಹಾಸಂಗಮ ನಡೆಯುತ್ತಿರುವುದು ಇಂದಿನ ಪರಿಸ್ಥಿತಿಯಲ್ಲಿ ಸಮಂಜಸವಾಗಿದೆ. ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಅನೇಕ ಧರ್ಮ, ಜಾತಿಗಳಿವೆ. ಜಾತಿ ಧರ್ಮಗಳನ್ನು ನಾವು ಮಾಡಿಲ್ಲ, ಮೊದಲಿನಿಂದ ನಮ್ಮಲ್ಲಿ ಬೆಳೆದುಕೊಂಡು ಬಂದಿದೆ. ನಾವು ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಬೇರೆ ಜಾತಿಯವರನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಖಾಯಿಲೆ ಬಂದರೆ ಶರೀರಕ್ಕೆ ಯಾರ ರಕ್ತವಾದರೂ ಕೊಡಿ, ಪ್ರಾಣ ಉಳಿದರೆ ಸಾಕು ಎನ್ನುತ್ತೇವೆ. ಇಂಥವರದ್ದೇ ರಕ್ತ ಕೊಡಿ ಎಂದು ಕೇಳುವುದಿಲ್ಲ. ಗುಣಮುಖರಾದ ನಂತರ ಯಾವ ಜಾತಿ ಎಂದು ಕೇಳುವುದು ನ್ಯಾಯವೇ? ಬಸವಣ್ಣನವರು ದಯೆ ಇಲ್ಲದ ಧರ್ಮ ಯಾವುದಯ್ಯ? ದಯೆಯೇ ಧರ್ಮದ ಮೂಲ ಎಂದು ಹೇಳಿದ್ದಾರೆ. ಇದನ್ನು ತಿಳಿದುಕೊಳ್ಳಬೇಕು.

ಇತ್ತೀಚೆಗೆ ಸನಾತನ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿದ್ದಾರೆ. ಯಾವ ಧರ್ಮವೂ ದ್ವೇಷಿಸಬೇಕು ಎಂದು ಹೇಳುವುದಿಲ್ಲ. ಕಾನೂನು ಓದಿರುವ ವಕೀಲನೊಬ್ಬ ಈ ರೀತಿ ಮಾಡುವುದನ್ನು ನಾವು ಖಂಡಿಸಬೇಕು. ಸಹಿಸಿಕೊಳ್ಳಬಾರದು. ಇಂಥವೆಲ್ಲಾ ನಡೆದರೆ ಸಮಾಜದಲ್ಲಿ ಶಾಂತಿ ಹೇಗೆ ನೆಲೆಸಲು ಸಾಧ್ಯ? ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com