
ಹಾಸನ: ಆರ್.ಎಸ್.ಎಸ್ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ತೊಂದರೆ ಕೊಟ್ಟು ನಡೆಸುತ್ತಿರುವ ಎಲ್ಲಾ ಸಂಘಟನೆಗಳನ್ನು ನಿರ್ಬಂಧಿಸುವ ಬಗ್ಗೆ ಯೋಜನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದರು.
ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಂಘಟನೆಗಳ ನಿರ್ಬಂಧದ ಬಗ್ಗೆ ಈಗಾಗಲೇ ತಮಿಳುನಾಡು ಸರ್ಕಾರ ಕ್ರಮ ಕೈಗೊಂಡಿದ್ದು ಅದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಅದರ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಜೆಡಿಎಸ್ ಶಾಸಕರಿಂದ ಬಂದಿರುವ ಅನುದಾನ ತಾರತಮ್ಯ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಅವರು ಅಧಿಕಾರದಲ್ಲಿದ್ದಾಗ ಎಷ್ಟು ಅನುದಾನ ನೀಡಿದರು? ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ನಮ್ಮ ಶಾಸಕರಿಗೆ ಎಷ್ಟು ಹಣ ಕೊಟ್ಟರು? ಈಗ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ. ನಾವು ಕೆಲಸ ಮಾಡ್ತಿದ್ದೇವೆ. ರಾಜ್ಯದ ಅಭಿವೃದ್ಧಿ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧವಾಗಿದೆ. ಕೋರ್ಟ್ ಹೇಳಿದ ತಕ್ಷಣ ಚುನಾವಣೆ ಮಾಡುತ್ತೇವೆ. ಎಲ್ಲ ಚುನಾವಣೆಗಳನ್ನು ಹಂತ ಹಂತವಾಗಿ ನಡೆಸಲಾಗುವುದು. ಪ್ರಜಾಪ್ರಭುತ್ವ ಗಟ್ಟಿಯಾಗೋದು ಚುನಾವಣೆಗಳಿಂದ ಎಂದರು.
ಔತಣ ಕೂಟದ ವಿಚಾರದಲ್ಲಿ ರಾಜಕೀಯ ಬೆಳೆಸುವುದು ಬೇಡ, ನಾನು ಆಗಾಗ ಫೋಟೋ ಪ್ರಚಾರದ ವ್ಯವಸ್ಥೆ ಮಾಡುತ್ತಿರುತ್ತೇನೆ. ಇದಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದರು.
Advertisement