
ಬೆಂಗಳೂರು: ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಬಂಧನ ಕಾನೂನುಬಾಹಿರ ಎಂದು ಘೋಷಿಸಲು ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ತಮ್ಮ ಪತಿ ವೀರೇಂದ್ರ ಪಪ್ಪಿಯನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಕಾನೂನುಬಾಹಿರ ಎಂದು ಘೋಷಿಸಿ, ಬಿಡುಗಡೆಗೆ ಆದೇಶಿಸಬೇಕು ಎಂದು ಕೋರಿ ಶಾಸಕರ ಪತ್ನಿ ಡಿ.ಆರ್.ಚೈತ್ರಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.
ವೀರೇಂದ್ರ ಪಪ್ಪಿ ಅವರನ್ನು ಪಿಎಂಎಲ್ ಕಾಯ್ದೆಯಡಿ ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಕಾನೂನುಬಾಹಿರ ಎಂದು ಘೋಷಿಸುವಂತೆ ಪತ್ನಿ ಚೈತ್ರಾ ತಮ್ಮ ಅರ್ಜಿಯಲ್ಲಿ ಕೋರಿದ್ದರು.
ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕ ಸದಸ್ಯ ಪೀಠ, ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.
ಅಕ್ರಮ ಬೆಟ್ಟಿಂಗ್ ಆರೋಪ ಸಂಬಂಧ ಅರ್ಜಿದಾರರ ಪತಿಯ ವಿರುದ್ಧ ಐದು ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಪ್ರಕರಣಗಳು ಅವರ ಪರವಾಗಿಯೇ ಇದೆ. ಆದರೆ, ಮತ್ತೊಂದು ಪ್ರಕರಣ ವಿಚಾರಣಾ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಬಿಡುಗಡೆಗೆ ಆದೇಶ ನೀಡಲಾಗದು ಎಂದು ನ್ಯಾಯಪೀಠ ತಿಳಿಸಿದೆ.
Advertisement