
ಬೆಳಗಾವಿ: ಸರ್ಕಾರಿ ಶಾಲೆ, ಕಾಲೇಜು ಹಾಗೂ ಇನ್ನಿತರ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ತಮಿಳುನಾಡು ನೀತಿಯನ್ನು ಅಧ್ಯಯನ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಬಲಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಒಂದು ರಾಜಕೀಯ ಸಂಘಟನೆಯೇ ಹೊರತು, ಸಾಮಾಜಿಕ ಸಂಘಟನೆಯಲ್ಲ. ಹೀಗಾಗಿ ಸರ್ಕಾರಿ ಸ್ಥಳಗಳಲ್ಲಿ ಆರ್'ಎಸ್ಎಸ್ ಚಟುವಟಿಕೆಗಳನ್ನು ನಡೆಸಬಾರದು ಹಾಗೂ ಈ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು ಎಂದು ಹೇಳಿದರು.
ಆರ್‌ಎಸ್‌ಎಸ್ ನಾಯಕರು ವಿವಿಧ ಸರ್ಕಾರಗಳನ್ನು ರಚಿಸುವಲ್ಲಿ ಮತ್ತು ಉರುಳಿಸುವಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಯಲ್ಲೂ ಆ ಸಂಘಟನೆಯ ನಾಯಕರು ಸ್ಪರ್ಧಿಸುತ್ತಾರೆ. ಹಾಗಾಗಿ ಅದು ಸಾಮಾಜಿಕ ಸಂಘಟನೆಯಲ್ಲ. ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನ ಯಾವುದೇ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕು ಎಂದು ತಿಳಿಸಿದರು.
ರಾಜ್ಯದಾದ್ಯಂತ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕಡ್ಡಾಯ ಕೆಲಸ ನಿಯಮ ಮತ್ತು ಕೌನ್ಸೆಲಿಂಗ್ ಮೂಲಕ ವೈದ್ಯರನ್ನು ನೇಮಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕ ಪ್ರಕ್ರಿಯೆ ನಡೆದಿದೆ. 230 ವೈದ್ಯರ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. ಕಡ್ಡಾಯ ಕೆಲಸದ ನಿಯಮದ ಮೂಲಕ 1,800 ಹೆಚ್ಚುವರಿ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
Advertisement