
ಬೆಂಗಳೂರು: ವಿವಿಧ ಸಂಸ್ಥೆ ಹಾಗೂ ಸ್ಥಳಗಳಿಗೆ ಹಲವಾರು ಬಾಂಬ್ ಬೆದರಿಕೆ ಇಮೇಲ್ ಗಳು ಬರುತ್ತಿದ್ದು, ಈ ಬಗ್ಗೆ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ,
ಕೆಲ ಶಾಲೆಗಳು, ಸರ್ಕಾರಿ ಕಚೇರಿಗಳಿಗೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಬಾಂಬ್ ಬರುತ್ತಲೇ ಇದೆ. ಬೆಂಗಳೂರು ಒಂದರಲ್ಲೇ 34 ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ 27, ಚೆನ್ನೈ 22 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಬಾಂಬ್ ಬೆದರಿಕೆಗಳನ್ನು ತಪ್ಪಿಸಲು ಹಾಗೂ ಹುಸಿ ಬೆದರಿಕೆಯೊಡ್ಡುವವರ ಹೆಡೆಮುರಿ ಕಟ್ಟಲು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ.
ಬೆದರಿಕೆ ಸಂದೇಶ ರವಾನೆಯ ಮೂಲ ಪತ್ತೆ ಮಾಡುವುದು ತನಿಖಾ ತಂಡದ ಗುರಿಯಾಗಿದ್ದು, ವಿವರವಾದ ತಾಂತ್ರಿಕ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತನಿಖಾ ತಂಡಕ್ಕೆ ಉಪ ಪೊಲೀಸ್ ಆಯುಕ್ತ (ಡಿಸಿಪಿ) ದರ್ಜೆಯ ಅಧಿಕಾರಿಯೊಬ್ಬರು ನೇತೃತ್ವ ವಹಿಸಿದ್ದಾರೆ. ಬೆಂಗಳೂರಿನಲ್ಲಿರುವ ಖಾಸಗಿ ಶಾಲೆಗಳು, ವಿಮಾನ ನಿಲ್ದಾಣ, ಹೋಟೆಲ್‌ಗಳು ಮತ್ತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಿವಾಸಗಳಿಗೆ ಕಳುಹಿಸಲಾದ ಬಾಂಬ್ ಬೆದರಿಕೆ ಸಂದೇಶಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 38 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ದೇಶಾದ್ಯಂತ, ಇಂತಹ 100 ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.
ಹೆಚ್ಚಿನ ಬೆದರಿಕೆ ಸಂದೇಶಗಳಲ್ಲಿ ತಮಿಳುನಾಡಿನ ಪ್ರಮುಖ ರಾಜಕಾರಣಿಗಳು ಮತ್ತು ಪತ್ರಕರ್ತರ ಹೆಸರುಗಳು ಉಲ್ಲೇಖಿಸಲ್ಪಟ್ಟಿದ್ದು, ಅಲ್ಲಿಂದಲೇ ಬೆದರಿಕೆಗಳು ಬರುತ್ತಿರಬಹುದು ಎಂಬ ಅನುಮಾನಗಳು ಹೆಚ್ಚಾಗಿವೆ. ಹೀಗಾಗಿ ಬೆದರಿಕೆ ಸಂದೇಶ ಕಳುಹಿಸುವವರ ಐಪಿ ವಿಳಾಸಗಳನ್ನು ಪತ್ತೆ ಹಚ್ಚುವತ್ತ ಪೊಲೀಸರು ಗಮನಹರಿಸಿದ್ದಾರೆಂದು ತಿಳಿಸಿದ್ದಾರೆ.
Advertisement