
ಬೆಂಗಳೂರು: ಬೆಂಗಳೂರಿನಲ್ಲಿ ಬೈಕ್ ಸವಾರನಿಗೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಪಾಳ ಮೋಕ್ಷ ಮಾಡಿರುವ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದಾರೆ. ಈ ವೇಳೆ ದಾಖಲೆ ಪರಿಶೀಲನೆ ಮಾಡುವಾಗ ಅಧಿಕಾರಿ ಮತ್ತು ಬೈಕ್ ಸವಾರನ ನಡುವೆ ಬಿಸಿ ವಾಗ್ವಾದ ನಡೆದಿದೆ.
ಈ ವೇಳೆ ನೋಡ ನೋಡುತ್ತಲೇ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬೈಕ್ ಸವಾರನೆ ಕೆನ್ನೆಗೆ ಭಾರಿಸಿದ್ದಾರೆ. ಈ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಪೊಲೀಸ್ ಅಧಿಕಾರಿಯ ಕೃತ್ಯ ಕಾನೂನು ಬಾಹಿರ ಎಂದು ಕೆಲ ನೆಟ್ಟಿಗರು ಆಕ್ರೋಶ ವ್ಕಕ್ತಪಡಿಸುತ್ತಿದ್ದು, ಯಾವುದೇ ಅಧಿಕಾರವಿಲ್ಲದಿದ್ದರೂ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವುದು ಅಕ್ಷಮ್ಯ. ಅವರ ವಿರುದ್ಧ ಇಲಾಖೆಯ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಮತ್ತೊಬ್ಬ ಬಳಕೆದಾರ ಅಧಿಕಾರಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಬ್ಬ ಬಳಕೆದಾರರು, “ತುಂಬಾ ಕೆಟ್ಟ ನಡವಳಿಕೆ” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, “ಟ್ರಾಫಿಕ್ ನಿಯಂತ್ರಿಸುವ ಬದಲು, ಈ ಜನರು ಸವಾರರನ್ನು ಏಕೆ ಹೊಡೆಯುತ್ತಿದ್ದಾರೆ?” ಎಂದು ಬರೆದಿದ್ದಾರೆ. ಮೂರನೆಯವರು, “ಈ ಪೊಲೀಸ್ ವ್ಯಕ್ತಿ ಸಾಮಾನ್ಯ ಮನುಷ್ಯನನ್ನು ಹೊಡೆಯಲು ಎಷ್ಟು ಧೈರ್ಯ? ದಯವಿಟ್ಟು ಈ ಗುಂಡಾ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ಇಲಾಖೆಯಲ್ಲಿ ನಮಗೆ ಅಂತಹ ಗುಂಡಾಗಳು ಅಗತ್ಯವಿಲ್ಲ” ಎಂದು ಕೇಳಿದರು.
ಬೆಂಗಳೂರು ಸಂಚಾರ ಪೊಲೀಸರು ಈ ಘಟನೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
Advertisement