
ಬೆಂಗಳೂರು: ಕರ್ತವ್ಯ ನಿರತ ಮಹಿಳಾ ಪೊಲೀಸ್ ಪೇದೆ ಮೇಲೆ ಪಾನಪತ್ತ ಪುಂಡರ ಗುಂಪೊಂದು ಹಲ್ಲೆ ನಡೆಸಿರುವ ಘಟನೆಯೊಂದು ಸೋಮನಹಳ್ಳಿ-ಮುಕ್ಕೊಡು ಬಳಿ ಭಾನುವಾರ ನಡೆದಿದೆ.
ಜೋರಾಗಿ ಮ್ಯೂಸಿಕ್ ಹಾಕಿಕೊಂಡಿದ್ದ ಗುಂಪೊಂದು ರಸ್ತೆಯಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಪೇದೆ ಸ್ಥಳಕ್ಕೆ ತೆರಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಮಹಿಳಾ ಪೇದೆ ಕಾಲರ್ ಹಿಡಿದು ಹಲ್ಲೆ ನಡೆಸಿದ್ದಾರೆ.
ಮಹಿಳಾ ಪೊಲೀಸ್ ಪೇದೆ ಯಶೋಧಾಬಾಯಿ ಎಂ ಅವರು ರಾತ್ರಿ 9.30 ರ ಸುಮಾರಿಗೆ ಕರ್ತವ್ಯ ಮುಗಿಸಿ, ತಮ್ಮ ಪತಿ ಸತೀಶ್ ಮತ್ತು ಗ್ರಾಮದ ನಿವಾಸಿ ಶಂಕರ್ ಅವರೊಂದಿಗೆ ಮನೆಗೆ ಮರಳುತ್ತಿದ್ದರು.
ಸೋಮನಹಳ್ಳಿ-ಮುಕ್ಕೊಡು ರಸ್ತೆಯ ಮೂಲಕ ಮುನಿನಗರದ ಕಡೆಗೆ ಪ್ರಯಾಣಿಸುತ್ತಿದ್ದಾಗ ರಸ್ತೆಯ ಮಧ್ಯದಲ್ಲಿ ಸುಮಾರು ಏಳರಿಂದ ಎಂಟು ಪುರುಷರು ಮದ್ಯ ಸೇವಿಸುತ್ತಿರುವುದು ಕಂಡು ಬಂದಿತ್ತು. ಆರೋಪಿಗಳು ರಸ್ತೆಯಲ್ಲಿ ಮದ್ಯದ ಬಾಟಲಿಗಳನ್ನು ಇರಿಸಿ, ಕಾರಿನಲ್ಲಿ ಜೋರಾಗಿ ಸಂಗೀತ ಹಾಕಿದ್ದು. ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಿ, ನೃತ್ಯ ಮಾಡುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಸ್ಥಳಕ್ಕೆ ತೆರಳಿದ ಯಶೋಧಾಬಾಯಿ ಅವರು, ರಸ್ತೆಯಲ್ಲಿ ಮದ್ಯಪಾನ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ ಈ ವೇಳೆ ಆರೋಪಿಗಳಲ್ಲಿ ಒಬ್ಬ, ನಮ್ಮನ್ನು ಪ್ರಶ್ನಿಸಲು ನೀವು ಯಾರು? ಇದು ನಮ್ಮ ಹಳ್ಳಿ; ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಕೂಗಿದ್ದಾನೆ. ಅಲ್ಲದೆ, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾನೆ.
ಬಳಿಕ ಪೇದೆ ತಮ್ಮ ಮೊಬೈಲ್‌ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ, ಆರೋಪಿಗಳಲ್ಲಿ ಒಬ್ಬ ಫೋನ್ ಕಸಿದುಕೊಂಡಿದ್ದಾನೆ. ಬಳಿಕ ಪೇದೆಯ ಪತಿ ಸತೀಶ್ ಮತ್ತು ಶಂಕರ್ ಮಧ್ಯಪ್ರವೇಶಿಸಿ ಫೋನ್ ಹಿಂತಿರುಗಿಸುವಂತೆ ಕೇಳಿದಾಗ, ಆರೋಪಿಗಳು ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ.
ಮತ್ತೊಬ್ಬ ವ್ಯಕ್ತಿ ಮಹಿಳೆಯ ಎಡ ಕೆನ್ನೆಗೆ ಹೊಡೆದು, ಕಾಲರ್ ಹಿಡಿದು, ಸಮವಸ್ತ್ರದ ಗುಂಡಿಯನ್ನು ಹರಿದು ನೆಲಕ್ಕೆ ತಳ್ಳಿದ್ದಾರೆ. ಈ ವೇಳೆ ಪೇದೆ ಸಹಾಯಕ್ಕಾಗಿ ಕಿರುಚಿದಾಗ, ಆರೋಪಿಗಳು ಆಕೆಯ ಫೋನ್ ಅನ್ನು ನೆಲಕ್ಕೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಆರೋಪಿಗಳು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಪ್ರಕಱಣ ಸಂಬಂಧ ಮೂವರು ಆರೋಪಿಗಲನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಮುಕ್ಕೊಡು ಗ್ರಾಮದ ನಿವಾಸಿಗಳಾದ ಭರತ್, ರಾಕೇಶ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ.
Advertisement