
ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯ ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಹಳಿಯ ಬಳಿ ಗುರುವಾರ ಸಂಜೆ ನಡೆದಿದೆ.
ಶ್ರೀರಾಂಪುರ ಸಮೀಪದ ಸ್ವತಂತ್ರಪಾಳ್ಯ ನಿವಾಸಿ ಯಾಮಿನಿ ಪ್ರಿಯಾ (20) ಕೊಲೆಯಾದ ವಿದ್ಯಾರ್ಥಿನಿ. ಯಾಮಿನಿ ಪ್ರಿಯಾ ಲವ್ ಮಾಡಲು ಒಪ್ಪದಿರುವುದಕ್ಕೆ ಕೊಲೆ ಮಾಡಿರುವ ಸಾಧ್ಯತೆಗಳಿದ್ದು, ವಿಘ್ನೇಶ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.
ಗೋಪಾಲ್ ಅವರ ಪುತ್ರಿ ಪ್ರಿಯಾ ಅವರು ಬನಶಂಕರಿ ಮೂರನೇ ಹಂತದ ಖಾಸಗಿ ಕಾಲೇಜಿನಲ್ಲಿ ಬಿ.ಫಾರ್ಮಾ ಓದುತ್ತಿದ್ದರು. ಮನೆಯ ಪಕ್ಕದ ನಿವಾಸಿ ವಿಘ್ನೇಶ್ ಪರಿಚಯವಾಗಿದ್ದ. ಪ್ರೀತಿಸುವಂತೆ ಆರೋಪಿ ವಿಘ್ನೇಶ್ ಬಲವಂತ ಮಾಡುತ್ತಿದ್ದ. ಆದರೆ, ಪ್ರಿಯಾ ಅವರು ನಿರಾಕರಿಸಿದ್ದರು ಎಂದು ಮೂಲಗಳು ಹೇಳಿವೆ.
ಬಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಪ್ರಿಯಾ, ಎಕ್ಸಾಮ್ ಇದೆ ಎಂದು ಇಂದು (ಅಕ್ಟೋಬರ್ 16) ಬೆಳಗ್ಗೆ ಏಳು ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗಿದ್ದು, ಮಧ್ಯಾಹ್ನ ಕಾಲೇಜ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಹಿಂದಿನಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿ, ಪ್ರಿಯಾಳ ಕತ್ತು ಕೊಯ್ದು ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಶ್ರೀರಾಮ ಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಲವ್ ವಿಚಾರಕ್ಕೆ ಈ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು ತನಿಖೆ ನಡೆಸಿದ್ದಾರೆ.
ಯಾಮಿನಿ ಪ್ರಿಯಾ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಒಮ್ಮೆ ಪ್ರಿಯಾಗೆ ಬಲವಂತವಾಗಿ ತಾಳಿ ಕೂಡ ಕಟ್ಟಿದ್ದ. ಪ್ರಿಯಾ ಅವರು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಹೇಳಿದರು.
ವಿಘ್ನೇಶ್ ಕಳೆದ ಹಲವು ತಿಂಗಳಿನಿಂದ ನನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ. ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಈ ಸಂಬಂಧ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದೆವು. 6 ತಿಂಗಳ ಹಿಂದೆ ಪೊಲೀಸರು ಆತನನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದರು ಎಂದು ಪ್ರಿಯಾ ತಂದೆ ಗೋಪಾಲ್ ತಿಳಿಸಿದರು.
Advertisement