
ಬೆಂಗಳೂರು: ಆರ್ಕೆಸ್ಟ್ರಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ, ಲಾಂಗ್‌ನಿಂದ ಹಲ್ಲೆ ಮಾಡಿ, ಸರಗಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಯೋಗಾನಂದ (35) ಹಾಗೂ ಈತನ ಸಹಚರ ಪ್ರವೀಣ್ ಬಂಧಿತರು. ಇವರಿಂದ 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದರು.
ಸೆ.13ರಂದು ದೂರುದಾರ ಮಹಿಳೆ ಉಷಾ ಹಾಗೂ ಸ್ನೇಹಿತೆ ವರಲಕ್ಷ್ಮೀ ಎಂಬವರು ಗಣೇಶ ಹಬ್ಬದ ಆರ್ಕೆಸ್ಟ್ರಾ ಮುಗಿಸಿ ಮನೆಗೆ ವಾಪಸ್ ಆಗುವಾಗ ಪಲ್ಸರ್ ಬೈಕ್ನಲ್ಲಿ ಬಂದ ದುರುಳರು ಮಚ್ಚು ತೋರಿಸಿದ್ಧಾರೆ. ಗಾಬರಿಗೊಂಡ ಉಷಾ ಸರ ನೀಡಿದರೆ, ವರಲಕ್ಷ್ಮಿ ಅವರು ಪ್ರತಿರೋಧ ತೋರಿಸಿದ್ದು ಮಚ್ಚಿನಿಂದ ಹಲ್ಲೆ ಮಾಡಿದ್ದರು. ಈ ವೇಳೆ ಅವರ, ಕೈ ಬೆರಳು ತುಂಡಾಗಿತ್ತು.
ಅದೇ ದಿನ ಕುಮಾರಸ್ವಾಮಿ ಲೇಔಟ್ ಹಾಗೂ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement