ಮತ್ತೆ ಸರ್ಕಾರ V/s ಗುತ್ತಿಗೆದಾರರ ಸಮರ: ಬಿಲ್​ ಕ್ಲಿಯರ್​ ಮಾಡಲು 1 ತಿಂಗಳ ಗಡುವು..!

ಬಾಕಿ ಬಿಲ್ ಪಾವತಿ ವಿಚಾರವಾಗಿ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗಿತ್ತು. ಈ ವೇಳೆ ಅವರು ಭರವಸೆ ನೀಡಿದ್ದರು. ಭರವಸೆಯಂತೆ 2.5 ವರ್ಷಗಳಿಂದ ಕಾಯುತ್ತಲೇ ಇದ್ದೇವೆ.
FIle photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಾಕಿ ಬಿಲ್‌ ಪಾವತಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮತ್ತೆ ಸಿಡಿದೆದ್ದಿದ್ದು, ಇನ್ನೊಂದು ತಿಂಗಳಲ್ಲಿ ಬಾಕಿ ಬಿಲ್ ಪಾವತಿ ಮಾಡದಿದ್ದರೆ, ಕಮಿಷನ್ ದಂಧೆ ವಿಚಾರ ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರ್ ಅವರು ಮಾತನಾಡಿ, ಬಾಕಿ ಬಿಲ್ ಪಾವತಿ ವಿಚಾರವಾಗಿ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗಿತ್ತು. ಈ ವೇಳೆ ಅವರು ಭರವಸೆ ನೀಡಿದ್ದರು. ಭರವಸೆಯಂತೆ 2.5 ವರ್ಷಗಳಿಂದ ಕಾಯುತ್ತಲೇ ಇದ್ದೇವೆ. ಇನ್ನೂ 44 ದಿನಗಳವರೆಗೆ ಕಾಯುತ್ತೇವೆ. ಆದರೂ ಪಾವತಿ ಮಾಡದೇ ಹೋದರೆ, ಕೆಲಸ ಸ್ಥಗಿತಗೊಳಿಸುವುದಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಸಂಪರ್ಕಿಸುತ್ತೇವೆಂದು ಹೇಳಿದ್ದಾರೆ.

ದಸರಾ ಉತ್ಸವದ ನಂತರ ಸಭೆ ನಡೆಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಸಮಸ್ಯೆ ಬಗೆಹರಿಯದಿದ್ದರೆ, ಕಮಿಷನ್ ದಂಧೆ ವಿಚಾರವಾಗಿ ಡಿಸೆಂಬರ್‌ನಲ್ಲಿ ರಾಜ್ಯಪಾಲರಿಗೆ ದೂರು ನೀಡುತ್ತೇವೆಂದೂ ಎಚ್ಚರಿಸಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು, ಗುತ್ತಿಗೆದಾರರಿಗೆ ಹಣ ಬಿಡುಗಡೆ ವಿಚಾರದಲ್ಲಿ ಕಮಿಷನ್ ದುಪ್ಪಟ್ಟು ಆಗಿದೆ ಎಂದು ನಾನು ಪತ್ರದಲ್ಲಿ ಹೇಳಿದ್ದೇನೆ. ಆದರೆ, ಶೇ.40, 60 ಅಥವಾ 80 ಎಂದು ಹೇಳಿಲ್ಲ. ಸಣ್ಣಪುಟ್ಟ ಗುತ್ತಿಗೆದಾರರು ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದ್ದಾರೆ. ದಯವಿಟ್ಟು ಹಣ ಕೊಡಿಸಿ ಎಂದು ಕರೆ ಮಾಡಿ ಅವಲತ್ತುಕೊಳ್ಳುತ್ತಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಲಂಚ, ಕಮಿಷನ್‌ ಇಲ್ಲ ಎಂದು ಹೇಳುವುದಿಲ್ಲ. ಮುಂದೆ ಡಿಸೆಂಬರ್‌ನಲ್ಲಿ ಎಷ್ಟು ಪರ್ಸೆಂಟ್‌ ಕಮಿಷನ್‌ ಎಂಬುದನ್ನು ಹೇಳುತ್ತೇವೆ ಎಂದು ತಿಳಿಸಿದರು.

FIle photo
ರಸ್ತೆ ಗುಂಡಿ ದುರಸ್ತಿಗೆ 1,100 ಕೋಟಿ ರೂ: ಗುತ್ತಿಗೆದಾರರು-ಎಂಜಿನಿಯರ್‌ಗಳಿಗಷ್ಟೇ ಲಾಭ ಎಂದ ತಜ್ಞರು

ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿ ಮೇಲಿನ ಭರವಸೆಯಿಂದ ಎಲ್ಲ ಜಿಲ್ಲೆಗಳ ಗುತ್ತಿಗೆದಾರರು ಈವರೆಗೆ ಸಮಾಧಾನದಿಂದ ಇದ್ದೇವೆ. ಸರ್ಕಾರದ ಜೊತೆ ನಮಗೆ ಸಂಘರ್ಷ ಬೇಕಿಲ್ಲ ಎಂದರು.

ಪಿಡಬ್ಲ್ಯೂಡಿ ಇಲಾಖೆಯಲ್ಲಿ 9,000 ಕೋಟಿ ರೂ. ಬಾಕಿ ಇದೆ, ಅದು ಹಿರಿತನವನ್ನು ಅನುಸರಿಸುತ್ತಿದೆ. ಆದರೆ ಇತರ ಇಲಾಖೆಗಳಲ್ಲಿ ಅದೇ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ. ನೀರಾವರಿ ಇಲಾಖೆಯಲ್ಲಿ 12,000 ಕೋಟಿ ರೂ. ಬಾಕಿ ಇದೆ. ಒಟ್ಟಾರೆಯಾಗಿ, ಬಾಕಿ ಮೊತ್ತ 33,000 ಕೋಟಿ ರೂ. ಇದೆ. ನಾವು ಇದನ್ನು ಮುಖ್ಯಮಂತ್ರಿ ಮತ್ತು ಸಚಿವರ ಗಮನಕ್ಕೆ ತಂದಿದ್ದೇವೆ. ಪಿಡಬ್ಲ್ಯೂಡಿ ಹೊರತುಪಡಿಸಿ ಯಾವುದೇ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರದಿಂದ ಹಂತ ಹಂತವಾಗಿ ಬಾಕಿ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ.

ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಶೇಗಾಜಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಲೂ ಕಮಿಷನ್‌ ನಡೆಯುತ್ತಿದೆ. ಹಂಚಿಕೆಯಾಗುವ ಅನುದಾನದಲ್ಲಿ ಶಾಸಕರಿಗೂ ಕಮಿಷನ್‌ ಕೊಡಬೇಕಿದೆ. ಶೇ.70 ಶಾಸಕರು ಕಮಿಷನ್‌ ಪಡೆಯುತ್ತಿದ್ದಾರೆ. ಅದನ್ನು ಹೇಳುವುದರಲ್ಲಿ ನನಗೆ ಯಾವುದೇ ಅಂಜಿಕೆ ಇಲ್ಲ. ಟೆಂಡರ್‌ಗೂ ಮುಂಚಿತವಾಗಿ ಶೇ.15ರಿಂದ 20 ಪರ್ಸೆಂಟ್‌ ಕಮಿಷನ್‌ ಕೊಡಬೇಕು. ಇಲ್ಲದಿದ್ದರೆ ಟೆಂಡರ್‌ ಅಪ್ಲಿಕೇಷನ್‌ ತಿರಸ್ಕರಿಸಲಾಗುತ್ತದೆ. ಕೆಲ ಶಾಸಕರು ಇನ್ನೂ ಜಾಸ್ತಿ ಕಮಿಷನ್‌ ಕೇಳುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆಯುವಾಗ, ಆ ಶಾಸಕರ ಹೆಸರುಗಳನ್ನು ಉಲ್ಲೇಖಿಸುತ್ತೇವೆಂದು ತಿಳಿಸಿದ್ದಾರೆ.

ಇಲಾಖೆವಾರು ಬಾಕಿ ಬಿಲ್‌ಗಳ ವಿವರ ಇಂತಿದೆ...

  • ಜಲಸಂಪನ್ಮೂಲ 12 ಸಾವಿರ ಕೋಟಿ ರೂ.

  • ಲೋಕೋಪಯೋಗಿ 9 ಸಾವಿರ ಕೋಟಿ ರೂ.

  • ಆರ್‌ಡಿಪಿಆರ್ 3,800 ಕೋಟಿ ರೂ.

  • ಸಣ್ಣ ನೀರಾವರಿ ಇಲಾಖೆ 3 ಸಾವಿರ ಕೋಟಿ ರೂ.

  • ನಗರಾಭಿವೃದ್ಧಿ 2 ಸಾವಿರ ಕೋಟಿ ರೂ.

  • ವಸತಿ 1,200 ಕೋಟಿ ರೂ.

  • ಕಾರ್ಮಿಕ 800 ಕೋಟಿ ರೂ.

  • ಇತರ ಇಲಾಖೆ 1,200 ಕೋಟಿ ರೂ.

  • ಒಟ್ಟು 33 ಸಾವಿರ ಕೋಟಿ ರೂ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com