
ಬೆಂಗಳೂರು: ನಗರದ ರಸ್ತೆ ಗುಂಡಿ ಸಮಸ್ಯೆ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸಮಸ್ಯೆ ದೂರಾಗಿಸಲು 1,100 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಸರ್ಕಾರದ ಈ ನಡೆಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಅನುದಾನವು ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳಿಗೆ ಮಾತ್ರ ಲಾಭ ನೀಡಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ರಸ್ತೆಗಳು ಅಭಿವೃದ್ಧಿ ಕಾಣಲಿದ್ದು, ದುರಸ್ತಿ ಮತ್ತು ನಿರ್ಮಾಣಕ್ಕಾಗಿ 1,100 ಕೋಟಿ ರೂ.ಹಂಚಿಕೆ ಮಾಡಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಈ ನಿಧಿಯ ಲಾಭ ದೊರೆಯುವಂತೆ ನೋಡಿಕೊಳ್ಳಲು ಮತ್ತು ನಗರದಾದ್ಯಂತ ಸುಗಮ, ಗುಂಡಿ ರಹಿತ ರಸ್ತೆಗಳನ್ನು ನಿರ್ಮಿಸಲು ಬದ್ಧರಾಗಿದ್ದೇವೆಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನ 14 ವಿಧಾನಸಭಾ ಕ್ಷೇತ್ರಗಳಿಗೆ 50 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಮತ್ತು ಉಳಿದವುಗಳಿಗೆ ರಸ್ತೆಗಳ ಡಾಂಬರೀಕರಣಕ್ಕಾಗಿ 25 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೆಟ್ಟ ರಸ್ತೆಗಳು ಬೆಂಗಳೂರಿಗೆ ಶಾಪವಾಗಿ ಪರಿಣಮಿಸಿದ್ದು, ಗುಂಡಿಗಳಿಂದ ಸಾವುಗಳು ಸಂಭವಿಸುತ್ತಿವೆ. ಇದು ಸಂಚಾರದ ಮೇಲೆ ಪರಿಣಾಮ ಬೀರಿದೆ. ಅನುದಾನ ಹಂಚಿಕೆ ಮಾಡುತ್ತಿದ್ದರೂ, ಯೋಜನೆಯನ್ನು ಕಾರ್ಯಗೊಳಿಸಲು ಅಧಿಕೃತ ಸರ್ಕಾರ ಆದೇಶ ಮತ್ತು ಸಂಸ್ಥೆಯ ಕುರಿತು ಸ್ಪಷ್ಟತೆಗಳಿಲ್ಲ. ಅದೇ ರೀತಿ 50 ಕೋಟಿ ರೂ.ಗಳನ್ನು ಪಡೆಯುವ 14 ಕ್ಷೇತ್ರಗಳು ಮತ್ತು 25 ಕೋಟಿ ರೂ.ಗಳನ್ನು ಪಡೆಯುವ ಕ್ಷೇತ್ರಗಳ ವಿವರಗಳ ಕುರಿತು ಸ್ಪಷ್ಟತೆ ಬೇಕಿದೆ. ಈ ಯೋಜನೆಯನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ನಿರ್ವಹಿಸುವ ಸಾಧ್ಯತೆಯಿದೆ ಎಂದು ಡಿಸಿಎಂ ಕಚೇರಿಯ ಮೂಲಗಳು ತಿಳಿಸಿವೆ.
ಅಕ್ಟೋಬರ್ ಅಂತ್ಯದ ವೇಳೆಗೆ ಮಳೆ ಕಡಿಮೆಯಾಗಲಿದ್ದು, ಡಾಂಬರೀಕರಣವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಿದೆ ಎಂದು ಮಾಹಿತಿ ನೀಡಿದೆ.
ಆದಾಗ್ಯೂ, ಮೂಲಸೌಕರ್ಯ ಮತ್ತು ಕಾಮಗಾರಿ ಕಾರ್ಯಗಳ ಕುರಿತು ತಜ್ಞರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರು ಮತ್ತು ನಿಗಮದ ಎಂಜಿನಿಯರ್‌ಗಳು ಮಾತ್ರ ಈ ಹಂಚಿಕೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಐಐಎಸ್‌ಸಿಯ ಡಾ. ಆಶಿಶ್ ವರ್ಮಾ ಅವರು ಹೇಳಿದ್ದಾರೆ.
ಇಂಡಿಯನ್ ರೋಡ್ ಕಾಂಗ್ರೆಸ್‌ನ ಸದಸ್ಯರಾದ ಡಿ ಪ್ರಸಾದ್ ಅವರು ಮಾತನಾಡಿ, ರಸ್ತೆ ಮೂಲಸೌಕರ್ಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಗುರುತಿನ ಚೀಟಿಯನ್ನು ನೀಡುವಂತೆ ಸಲಹೆ ನೀಡಿದ್ದಾರೆ,
ಇಂಜಿನಿಯರ್‌ಗಳಿಗೆ ಗುರುತಿನ ಚೀಟಿ ನೀಡುವುದರಿಂದ ಅವರು ವರ್ಗಾವಣೆಗೊಂಡರೂ ಅವರನ್ನು ಪತ್ತೆಹಚ್ಚಲು, ಕಳಪೆ ಕೆಲಸವು ಬೆಳಕಿಗೆ ಬಂದರೆ, ಅವರ ಬಡ್ತಿಗಳನ್ನು ತಡೆಹಿಡಿಯಲು ಸಹಾಯ ಮಾಡುತ್ತದೆ. ಅಲ್ಲದೆ, ನಿವೃತ್ತಿಯ ನಂತರದ ಪ್ರಯೋಜನಗಳನ್ನು ಕಡಿತಗೊಳಿಸಬಹುದು ಎಂದು ಹೇಳಿದ್ದಾರೆ.
ಗುಂಡಿ ಸಮಸ್ಯೆಗೆ ಸರ್ಕಾರದ ಹಣವನ್ನು ಬಳಸಬಹುದು, ಒಂದು ಅಥವಾ ಎರಡು ತಿಂಗಳಲ್ಲಿ ಜನರು ಸಮಸ್ಯೆಯನ್ನು ಮರೆತು ಮುಂದೆ ಹೋಗುತ್ತಾರೆ, ಆಧರೆ, ಮತ್ತೆ ಮಳೆಯಾದಾಗ ಗುಂಡಿಗಳು ಸೃಷ್ಟಿಯಾಗುತ್ತವೆ. ಸರ್ಕಾರ ಮತ್ತೆ ಆದೇಶ ಹೊರಡಿಸುತ್ತದೆ. ಇದು ನಿರಂತರ ಸಮಸ್ಯೆಯಾಗಿಯೇ ಉಳಿಯುತ್ತದೆ. ರಸ್ತೆ ಗುಂಡಿಗೆ ಮೂಲಕ ಕಾರಣ ರಸ್ತೆಗಳಲ್ಲಿ ನೀರು ನಿಲ್ಲುವುದು. ಎಂಜಿನಿಯರ್‌ಗಳು ಮಾಡಬೇಕಾದ ಸರಳ ಕಾರ್ಯವೆಂದರೆ ಅಡ್ಡರಸ್ತೆಗಳನ್ನು ನೋಡಿಕೊಳ್ಳುವುದು. ರಸ್ತೆಬದಿಯಲ್ಲಿ ಬೀಳುವ ಮಳೆನೀರು ಪಕ್ಕದ ಚರಂಡಿಗಳಲ್ಲಿ ಹರಿಯಬೇಕು. ಇದನ್ನು ಮಾಡಿದರೆ, ವರ್ಷಗಳ ಕಾಲ ರಸ್ತೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ, ಆದರೆ ಅದಾಗುತ್ತಿಲ್ಲ ಎಂದು ವರ್ಮಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು ಮತ್ತು ರಸ್ತೆ ಮೇಲ್ಮೈಯಿಂದ ಚರಂಡಿಗೆ ನೀರಿನ ಹರಿವನ್ನು ನಿರ್ವಹಿಸಬೇಕು. ಮಳೆಗಾಲದಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬೇಕು. ರಸ್ತೆ ಯೋಜನೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕಟ್ಟುನಿಟ್ಟಾದ ಷರತ್ತನ್ನು ವಿಧಿಸಬೇಕು. ಸಾಫ್ಟ್‌ವೇರ್ ಐಡಿ ಮೂಲಕ ಅವರನ್ನು ಟ್ರ್ಯಾಕ್ ಮಾಡಬೇಕು ಮತ್ತು ದೋಷಪೂರಿತ ಕೆರಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರಸಾದ್ ಅವರು ಸಲಹೆ ನೀಡಿದ್ದಾರೆ.
Advertisement