
ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ನಡುವೆ ಮಾತಿನ ಚಕಮಕಿ ನಡೆಯಿತು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ನಡುವೆ ಸಣ್ಣ ವಾಗ್ವಾದ ನಡೆಯಿತು.
ಸಭೆಯಲ್ಲಿ ಪ್ರತಿ ಎಕರೆಗೆ 40 ರಿಂದ 50 ಲಕ್ಷ ರೂ. ಗಳವರೆಗೆ ಭೂ ಪರಿಹಾರ ನೀಡಬೇಕು ಎಂದು ತಿಮ್ಮಾಪೂರ್ ಒತ್ತಾಯಿಸಿದರು.
ಇದರಿಂದ ಸಿಟ್ಟಿಗೆದ್ದ ಡಿ.ಕೆ.ಶಿವಕಮಾರ್ ಅವರು, ನೀವೊಬ್ಬರು ಸಚಿವರು...ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂ ಪರಿಹಾರಕ್ಕೆ ಒಂದು ದರ ನಿಗದಿ ಮಾಡಿದ್ದಾರೆ. ಈಗ ಸಚಿವರಾಗಿರುವ ನಿಮಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ಅದರ ಮೇಲೆ ಒಂದಿಷ್ಟು ಹೆಚ್ಚಳ ಮಾಡಿ ಪರಿಹಾರ ನೀಡಬಹುದು. ನೀವು ಹೇಳಿದಂತೆ 40 ರಿಂದ 50 ಲಕ್ಷ ರೂ.ಗಳವರೆಗೂ ನೀಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಇದಕ್ಕೆ ಸಚಿವ ತಿಮ್ಮಾಪುರ್, ಜನರ ಅಭಿಪ್ರಾಯಗಳನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಜವಾಬ್ದಾರಿ. ಆ ಕೆಲಸ ಮಾಡಿದ್ದೇನೆ. ನಿಮ್ಮ ಅನುಭವ ಹಾಗೂ ಅವಕಾಶದಲ್ಲಿ ನಿರ್ಧಾರ ತೆಗೆದುಕೊಳ್ಳಿ ಎಂದು ಅಸಮಾಧಾನದಿಂದಲೇ ಪ್ರತಿಕ್ರಿಯಿಸಿದರು.
ಈ ವೇಳೆ ಗರಂ ಆದ ಡಿಕೆ.ಶಿವಕುಮಾರ್ ಅವರು, ಶಾಸಕರು, ರೈತ ಮುಖಂಡರುಗಳು ಮಾತನಾಡಲಿ. ಇಂತಹ ವೇದಿಕೆಯಲ್ಲಿ ನೀವು ಸಚಿವರಾಗಿ ಈ ರೀತಿ ಮಾತನಾಡಬಾರದು ಎಂದು ಹೇಳಿದರು.
ಈ ನಡುವೆ ಮಾಧ್ಯಮಗಳ ಮುಂದೆ ವಾಗ್ವಾದ ನಡೆಯುತ್ತಿರುವುದನ್ನು ಗಮನಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಜಟಾಪಟಿ ಬಹಿರಂಗಗೊಂಡು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಸೃಷ್ಟಿಯಾಗಬಾರದು ಎಂಬ ಕಾರಣಕ್ಕಾಗಿ ಮಾಧ್ಯಮಗಳ ಕ್ಯಾಮೆರಾಮನ್‌ಗಳನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದರು.
ಇದಕ್ಕೂ ಅವಕಾಶ ನೀಡದ ಡಿ.ಕೆ.ಶಿವಕುಮಾರ್ ಮಾಧ್ಯಮಗಳು ಇರಲಿ ಎಂದು ಹೇಳಿ ಅವರು ಮಾತನಾಡಲಿ ಎಂದು ಶಾಸಕರಿಗೆ ಅವಕಾಶ ಮಾಡಿಕೊಟ್ಟರು.
Advertisement