
ಕಾರವಾರ: ತೀಕ್ಷ್ಣ ಮೂಗಿನ ಸೂಜಿ ಮೀನು ಹೊಟ್ಟೆಗೆ ಚುಚ್ಚಿದ್ದರಿಂದ ಮೀನುಗಾರನೊಬ್ಬ ಸಾವನ್ನಪ್ಪಿರುವ ವಿಚಿತ್ರ ಘಟನೆಯೊಂದು ಕಾರವಾರದಲ್ಲಿ ನಡೆದಿದೆ.
ಮೃತನನ್ನು ಮಾಜಾಳಿ ದಂಡೇಭಾಗದ ನಿವಾಸಿ ಅಕ್ಷಯ್ ಅನಿಲ್ ಮಾಜಾಳಿಕರ್ (24) ಎಂದು ಗುರುತಿಸಲಾಗಿದೆ. ಅಕ್ಟೋಬರ್ 14ರಂದು ಅಕ್ಷಯ್, ಆಳ ಸಮುದ್ರದಲ್ಲಿ ಮೀನಿನ ಬೇಟೆಗೆ ತೆರಳಿದ್ದ. ದೋಣಿಯಲ್ಲಿದ್ದಾಗಲೇ 8ರಿಂದ 10 ಇಂಚು ಉದ್ದದ ಚೂಪು ಮೂತಿಯ ಸೂಜಿ ಮೀನು, ನೀರಿನಿಂದ ಜಿಗಿದು ಬಂದು ಅಕ್ಷಯ್ ಹೊಟ್ಟೆಗೆ ಚುಚ್ಚಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅಕ್ಷಯ್‌ನನ್ನ ಕೂಡಲೇ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
2 ದಿನ ಚಿಕಿತ್ಸೆ ಪಡೆದ ಬಳಿಕ ಗಾಯಕ್ಕೆ ಹೊಲಿಗೆ ಹಾಕಿ ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಆದರೆ, ನೋವು ಮರುಕಳಿಸಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಈ ನಡುವೆ ಅಕ್ಷಯ್ ಸಾವನ್ನು ಒಪ್ಪಿಕೊಳ್ಳದ ಕುಟುಂಬದ ಸದಸ್ಯರು, ವೈದ್ಯರ ವಿರುದ್ಧ ಆರೋಪ ಮಾಡಿದ್ದಾರೆ. ಸೂಕ್ತ ಚಿಕಿತ್ಸೆ ನೀಡದಿರುವುದು ಅಕ್ಷಯ್ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಅಕ್ಷಯ್ ಆರೋಗ್ಯ ಚೆನ್ನಾಗಿದೆ ಎಂದು ಹೇಳಿದ್ದರು. ಆದರೆ, ಮನೆಗೆ ಹೋದ ಬಳಿಕ ಅತೀವ್ರ ನೋವು ಕಾಣಿಸಿಕೊಂಡಿತ್ತು. ಗುರುವಾರ ಮೃತಪಟ್ಟಿದ್ದಾನೆಂದು ಹೇಳಿದ್ದಾರೆ.
ಏತನ್ಮಧ್ಯೆ ಸತ್ತ ಮೀನನ್ನು ವಿಶ್ಲೇಷಿಸಿದ ಸಮುದ್ರ ಜೀವಶಾಸ್ತ್ರಜ್ಞರು, ಅಕ್ಷಯ್ ಅವರನ್ನು ಕಚ್ಚಿರುವುದು ಸೂಜಿ ಮೀನು. ಈ ಮೀನು ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರದಲ್ಲಿ ಕಂಡುಬರುತ್ತದೆ. ಇದು ಕೆಂಪು ಸಮುದ್ರ ಮತ್ತು ಆಫ್ರಿಕನ್ ಕರಾವಳಿಯವರೆಗೆ ವಿಸ್ತರಿಸುತ್ತದೆ. ನೀರಿನಿಂದ ಹಾರಿ ಗಾಯಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಈ ಮೀನುಗಳು ಹೊಂದಿದ್ದು, ಹೀಗಾಗಿ ಈ ಜಾತಿಯ ಮೀನುಗಳ ಬಗ್ಗೆ ಮೀನುಗಾರರು ಭಯಪಡುತ್ತಾರೆಂದು ಹೇಳಿದ್ದಾರೆ.
ಮೀನುಗಾರ ನಾಗೇಂದ್ರ ಖಾರ್ವಿ ಅವರು ಮಾತನಾಡಿ, ಸೂಜಿ ಮೀನಿನಿಂದ ಉಂಟಾಗುವ ಘಟನೆಗಳು ಅಪರೂಪವಾಗಿದೆ. ನಾವು ಈ ಮೀನನ್ನು ನೋಡಿದ್ದೇವೆ ಹಾಗೂ ಹಿಡಿದಿದ್ದೇವೆ. ಆದರೆ, ಕಚ್ಚುವುದು, ಸಾವು ಸಂಭವಿಸಿರುವುದನ್ನು ನೋಡುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
Advertisement