
ಚಾಮರಾಜನಗರ: 27 ತಿಂಗಳುಗಳಿಂದ ವೇತನ ಸಿಗದ್ದಕ್ಕೆ ಬೇಸತ್ತು ನೀರುಗಂಟಿ (ವಾಟರ್ಮ್ಯಾನ್) ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಬೇಜವಾಬ್ದಾರಿತನದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಒ)ಯನ್ನು ಅಮಾನತುಗೊಳಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮ ಪಂಚಾಯತ್'ನ ಉಸ್ತುವಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮೇಗೌಡ ಕೆ.ಎನ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಆದೇಶ ಹೊರಡಿಸಿದ್ದಾರೆ.
ಹೊಂಗನೂರು ಗ್ರಾಮ ಪಂಚಾಯತ್‌ನಲ್ಲಿ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮಾಜಿ ಪಂಚಾಯತ್ ಉದ್ಯೋಗಿ ಚಿಕ್ಕುಸನಾಯಕ ಅವರು ಪಂಚಾಯತ್ ಕಟ್ಟಡದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಡೆತ್ ನೋಟ್ ವೇತನ ನೀಡದೇ ನನಗೆ ರಜೆ ಕೊಡದೇ ಸತಾಯಿಸಿದ್ದಾರೆ. ವೇತನಕ್ಕೆ ಪಿಡಿಒ ರಾಮೇಗೌಡ ಸಹಿ ಹಾಕಿದರೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸಹಿ ಮಾಡುತ್ತಿರಲಿಲ್ಲ. ನನ್ನ ಸಾವಿಗೆ ಪಿಡಿಒ ರಾಮೇಗೌಡ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷೆ ಪತಿ ಮೋಹನ್ ಕಾರಣ ಎಂದು ಬರೆದಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ, 2023 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
ತನಿಖೆಯಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993 ರ ಸೆಕ್ಷನ್ 111 ರ ಅಡಿಯಲ್ಲಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಲ್ಲಿ ಪ್ರಭಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮೇಗೌಡ ಕೆ.ಎನ್ ಅವರು, ವಿಫಲರಾಗಿದ್ದಾರೆ ಎಂದು ಕಂಡುಬಂದಿದೆ.
ಇದರಂತೆ ಕರ್ತವ್ಯ ನಿರ್ಲಕ್ಷ್ಯ ಮತ್ತು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1966 ರ ನಿಯಮ 3(i)(ii) ಮತ್ತು (iii) ರ ಉಲ್ಲಂಘನೆಯನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ರಾಮೇಗೌಡ ವಿರುದ್ಧ ಇಲಾಖಾ ವಿಚಾರಣೆಗೂ ಆದೇಶಿಸಿದ್ದಾರೆ.
ಏತನ್ಮಧ್ಯೆ ಸರ್ಕಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಟೀಕಿಸಿದ್ದು, ಕಾಂಗ್ರೆಸ್ ಸರ್ಕಾರದ ಆತ್ಮಹತ್ಯೆ ಭಾಗ್ಯಕ್ಕೆ ಮತ್ತೊಬ್ಬ ಸರ್ಕಾರಿ ನೌಕರ ಬಲಿ. ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಎರಡು ವರ್ಷಗಳಿಂದ ಸಂಬಳ ಸಿಗದೆ ಬೇಸತ್ತಿದ್ದ ವಾಟರ್ಮ್ಯಾನ್ ಚಿಕ್ಕಸು ನಾಯಕ ಅವರು ಗ್ರಾ.ಪಂ. ಕಚೇರಿ ಬಾಗಿಲು ಬಳಿ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ನಡೆದಿದೆ. ಎರಡು ದಿನಗಳ ಹಿಂದಷ್ಟೇ ಕಲಬುರ್ಗಿಯಲ್ಲಿ ಸಂಬಳ ಸಿಗದೆ ಗ್ರಂಥಪಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಆಘಾತದಿಂದ ಹೊರಬರುವ ಮುನ್ನವೇ ಈಗ ಕಾಂಗ್ರೆಸ್ ಸರ್ಕಾರದ ದಿವಾಳಿತನಕ್ಕೆ ಮತ್ತೊಂದು ಬಲಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಅವರೇ, ತಿಂಗಳಿಗೆ ಕೇವಲ 5,000 ರೂಪಾಯಿ ಸಂಬಳ ಪಡೆಯುವ ಒಬ್ಬ ಬಡ ವ್ಯಕ್ತಿಗೆ 2 ವರ್ಷದಿಂದ ಸಂಬಳ ಕೊಡದೇ ಸಾಯಿಸಿಬಿಟ್ಟರಲ್ಲ ಸ್ವಾಮಿ, ನಿಮ್ಮ ಸರ್ಕಾರಕ್ಕೆ ಹೃದಯ ಅನ್ನೋದೇ ಇಲ್ಲವಾ? ಮನುಷ್ಯತ್ವ ಅನ್ನೋದೇ ಇಲ್ಲವಾ? ನಿಮ್ಮ ದುರಾಡಳಿತಕ್ಕೆ ಇನ್ನೆಷ್ಟು ಅಮಾಯಕ ಸರ್ಕಾರಿ ನೌಕರರು, ಗುತ್ತಿಗೆದಾರರು ಬಲಿಯಾಗಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರೇ ಇದು ನಿಮ್ಮ "ಕರ್ನಾಟಕ ಮಾದರಿ"ಯೇ? ಭ್ರಷ್ಟ ಮತ್ತು ಶೋಷಕ ATM ಸರ್ಕಾರದ ಅಡಿಯಲ್ಲಿ ಕರ್ನಾಟಕ ದಿವಾಳಿಯಾಗಿದೆ. ಗುತ್ತಿಗೆದಾರರು ಸರ್ಕಾರಿ ಇಲಾಖೆಗಳಿಂದ 33,000 ಕೋಟಿ ರೂ. ಬಾಕಿ ಪಾವತಿಯನ್ನು ಕೇಳುತ್ತಿದ್ದಾರೆ. ನೀರಾವರಿಯಿಂದ ವಸತಿವರೆಗೆ, ಪಿಡಬ್ಲ್ಯೂಡಿಯಿಂದ ಕಾರ್ಮಿಕರವರೆಗೆ ಮುಖ್ಯಮಂತ್ರಿ @ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ.ಶಿವಕುಮಾರ್ ತಮ್ಮ ಕುರ್ಚಿಗಳನ್ನು ಉಳಿಸಿಕೊಳ್ಳಲು ಮತ್ತು ಅವರ ರಾಜಕೀಯ ಆಟಗಳಿಗೆ ಹಣಕಾಸು ಒದಗಿಸಲು ರಾಜ್ಯದ ಖಜಾನೆಯನ್ನು ಖಾಲಿ ಮಾಡುತ್ತಿದ್ದಾರೆ. ಇದು ಪ್ರತಿಯೊಂದು ಇಲಾಖೆಯ ಉಸಿರುಗಟ್ಟಿಸುತ್ತಿದೆ.
ಶೇ.40 ಕಮಿಷನ್ ಎಂಬ ಸುಳ್ಳು ಕಪೋಲಕಲ್ಪಿತ ಆರೋಪ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ತಾವು ಈಗ ಅದ್ಯಾವ ಮುಖ ಇಟ್ಟುಕೊಂಡು ಕಮಿಷನ್ ನಿಜ ಇದ್ದರೆ ಕೋರ್ಟಿಗೆ ಹೋಗಿ ಎಂದು ಗುತ್ತಿಗೆದಾರರಿಗೆ ಹೇಳುತ್ತಿದ್ದೀರಿ? ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಪಕ್ಷ ಆರೋಪ ಮಾಡುವ ಮುನ್ನ, ಹಾದಿ ಬೀದಿಯಲ್ಲಿ ಅದೆಂತದೋ PayCM ಸ್ಟಿಕ್ಕರ್ ಅಂಟಿಸುವ ಮುನ್ನ ಕೋರ್ಟ್ ಗೆ ಹೋಗಿ ಎಂದು ಯಾಕೆ ಹೇಳಲಿಲ್ಲ?
ಇಷ್ಟಕ್ಕೂ ಕಂಟ್ರಾಕ್ಟರ್ ಗಳ ಬಿಲ್ ಪಾವತಿಯಲ್ಲಿ ತಮಗೆ ಎಷ್ಟು ಪರ್ಸಂಟೇಜ್ ಕಮಿಷನ್ ಬೇಡಿಕೆ ಇಟ್ಟಿದ್ದೀರಿ? ಇದರಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಪಾಲೆಷ್ಟು? ಹೈಕಮಾಂಡ್ ಏಜೆಂಟುಗಳಾದ ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರಿಗೂ ಪಾಲಿದೆಯಾ?
ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ದುಡ್ಡಿಲ್ಲದೆ ಸರ್ಕಾರವನ್ನು ಪಾಪರ್ ಮಾಡಿದ್ದೀರಿ. ಅಪರೂಪಕ್ಕೆ ಕೊಡೋ ಬಿಲ್ಲಿಗೂ 80% ಕಮಿಷನ್ ಬೇಡಿಕೆ ಇಡುತ್ತಿದೀರಿ. ನಿಮ್ಮ ಸರ್ಕಾರದ ಲಜ್ಜೆಗೆಟ್ಟ ಭ್ರಷ್ಟಾಚಾರ, ಕಮಿಷನ್ ದಾಹದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿವೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವ ಉಳಿಸಿಕೊಳ್ಳಿ. ಕರ್ನಾಟಕವನ್ನು ಉಳಿಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement