
ಬೆಂಗಳೂರು: ನಮ್ಮ ಸರ್ಕಾರ ಆರ್‌ಎಸ್‌ಎಸ್"ನ್ನು ನಿಷೇಧ ಮಾಡಿಲ್ಲ. ಬಿಜೆಪಿ ಸರ್ಕಾರ ಆದೇಶ ಮಾಡಿದ್ದೇನೆ ಪುನರುಚ್ಛರಿಸಿದ್ದೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಸರ್ಕಾರಿ ಆವರಣದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಆಯಾ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಆಧಾರದ ಮೇಲೆ ಅನುಮತಿ ನೀಡಲಾಗುವುದು ಎಂದು ಹೇಳಿದರು.
ಸರ್ಕಾರಿ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲಿನ ನಿರ್ಬಂಧ ಹೇರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ಸರ್ಕಾರ ಆರ್.ಎಸ್.ಎಸ್ ನಿಷೇಧ ಮಾಡಿಲ್ಲ. ಶಾಲಾ-ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ ಆರ್.ಎಸ್.ಎಸ್ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಹೇಳಿದರು.
ಆದೇಶದಲ್ಲಿ ಯಾವುದೇ ನಿರ್ದಿಷ್ಟ ಸಂಘ ಅಥವಾ ಸಂಸ್ಥೆ ಎಂದು ಇಲ್ಲ. ಬಿಜೆಪಿ ಸರ್ಕಾರ ಆದೇಶ ಮಾಡಿದ್ದನ್ನೇ ನಾವು ಪುನರುಚ್ಚರಿಸಿದ್ದೇವೆ. ಅವರು ಮಾಡಬಹುದು, ನಾವು ಮಾಡಬಾರದೇ? 2013ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಶಾಲಾ ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು.
ಜಗದೀಶ್ ಶೆಟ್ಟರ್ ಅವರು ಶಿಕ್ಷಣ ಇಲಾಖೆ ಆದೇಶ ಮಾಡಿತ್ತು ನಾನಲ್ಲ ಎಂದಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಆದೇಶ ಹೊರಡಿಸಿದ್ದಾರೆ. ಸಂಘ ಸಂಸ್ಥೆಗಳಿಗೆ ಅನುಮತಿ ಕೊಡಲೇಬೇಕು ಎಂದು ಏನಿಲ್ಲ. ಶಾಂತಿ ಸುವ್ಯವಸ್ಥೆ ಮೇಲೆ ಬೀರುವ ಪರಿಣಾಮವನ್ನು ಯೋಚಿಸಿ ಅನುಮತಿ ನೀಡುವುದು, ಬಿಡುವುದು ಅವಲಂಬಿತವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಹೊಸ ಜಿಎಸ್‌ಟಿ ವ್ಯವಸ್ಥೆ ಕುರಿತು ಪ್ರಧಾನಿ ಮೋದಿಯವರನ್ನು ಟೀಕಿಸಿದ ಸಿಎಂ, ಕೇಂದ್ರವು 2017 ರಲ್ಲಿ ಜಿಎಸ್‌ಟಿ ವ್ಯವಸ್ಥೆಯನ್ನು ಪರಿಚಯಿಸಿತು. ಎಂಟು ವರ್ಷಗಳ ಕಾಲ ತೆರಿಗೆ ಸಂಗ್ರಹಿಸಿದ ನಂತರ ಈಗ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಿದ್ದಾರೆ. ಅದನ್ನು ದೀಪಾವಳಿ ಉಡುಗೊರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜಿಎಸ್‌ಟಿ ಅನುಷ್ಠಾನದಿಂದಾಗಿ ಕರ್ನಾಟಕಕ್ಕೆ 1,500 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.
Advertisement