
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದ ಅರಣ್ಯ ಪ್ರದೇಶದಲ್ಲಿ ಅಪರೂಪದ ಸ್ಕಾಪ್ಸ್ ಗೂಬೆ ಪತ್ತೆಯಾಗಿದ್ದು, ಈ ಬೆಳವಣಿಗೆ ಪಕ್ಷಿ ಪ್ರೇಮಿಗಳಲ್ಲಿ ಸಂತಸ ತರಿಸಿದೆ.
ವಿಶಿಷ್ಟ ಕಿವಿಯಂತಹ ಗರಿಯನ್ನು ಹೊಂದಿರುವ ಈ ಗೂಬೆ 20ರಿಂದ 25 ಸೆಂಟಿಮೀಟರ್‌ನಷ್ಟು ಉದ್ದವಿದ್ದು, ಬೂದು ಬಣ್ಣದಿಂದ ಕೂಡಿದೆ.
ಇದರ ಕಣ್ಣು ಕಡು ಕಪ್ಪು. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಹೀಗಾಗಿ ಈ ಗೂಬೆಗೆ ‘ಛದ್ಮವೇಷಧಾರಿ’ ಎಂದು ಕರೆಯಲಾಗುತ್ತದೆ.
ಶನಿವಾರ ರಾತ್ರಿ ದರೋಜಿ ಕರಡಿಧಾಮದ ಬಳಿ ಗೂಬೆಯ ವಟ್ ವಟ್ ಸದ್ದಿನಿಂದ ಎಚ್ಚೆತ್ತ ಪಕ್ಷಿ ವೀಕ್ಷಕರಾದ ಸವ್ಯಸಾಚಿ ರಾಯ್, ಶ್ರೀಧರ ಪೆರುಮಾಳ್ ಮತ್ತು ಪಂಪಯ್ಯ ಸ್ವಾಮಿ ಮಳೀಮಠ ಅವರು ಗೂಬೆಯನ್ನು ಹಿಂಬಾಲಿಸಿದ್ದರು. ಕೊನೆಗೂ ಅದು ಶ್ರೀಧರ ಪೆರುಮಾಳ್ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯಿತು.
ಈ ಪ್ರದೇಶದಲ್ಲಿ ಸ್ಕಾಪ್ಸ್ ಗೂಬೆ ಪತ್ತೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ. ಈ ಬೆಳವಣಿಗೆ ಅಭಯಾರಣ್ಯದ ಒಳಗೆ ಮತ್ತು ಸುತ್ತಮುತ್ತ ಪಕ್ಷಿಶಾಸ್ತ್ರೀಯ ಅಧ್ಯಯನಕ್ಕೆ ಹೊಸ ಮಾರ್ಗಗಳ ದಾರಿ ಮಾಡಿಕೊಟ್ಟಿದೆ ಎಂದು ಪಂಪಯ್ಯಸ್ವಾಮಿ ಮಳೀಮಠ ಅವರು ಹೇಳಿದ್ದಾರೆ.
ಸ್ಲಾತ್ ಕರಡಿಗಳು ಮತ್ತು ಇತರ ಸ್ಥಳೀಯ ವನ್ಯಜೀವಿಗಳನ್ನು ಬೆಂಬಲಿಸುವ ಈ ಆವಾಸಸ್ಥಾನದಲ್ಲಿ ಸ್ಕಾಪ್ಸ್ ಗೂಬೆ ಉಪಸ್ಥಿತಿಯು ನಾವು ಊಹಿಸಿದ್ದಕ್ಕಿಂತ ವಿಶಾಲವಾದ ಪರಿಸರ ವ್ಯಾಪ್ತಿಯನ್ನು ಸೂಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಭಾರತೀಯ ಸ್ಕಾಪ್ಸ್ ಗೂಬೆ ಈ ಪ್ರದೇಶದಲ್ಲಿ ಸಂತಾನೋತ್ಪತ್ತಿಯನ್ನು ಸ್ಥಾಪಿಸಿದೆಯೇ ಅಥವಾ ವಲಸೆಯೇ ಎಂಬುದರ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯಿದೆ ಎಂದು ತಿಳಿಸಿದ್ದಾರೆ.
ಜೀವವೈವಿಧ್ಯಕ್ಕೆ ದರೋಜಿ ಕರಡಿಧಾಮ ಹೆಸರುವಾಸಿಯಾಗಿದ್ದು, ಇದೀಗ ಸ್ಕಾಪ್ಸ್ ಗೂಬೆ ಪತ್ತೆಯು ಸಂಶೋಧಕರು ಹಾಗೂ ವನ್ಯಜೀವಿಗಳ ಉತ್ಸಾಹವನ್ನು ಹೆಚ್ಚಿಸಿದೆ.
Advertisement