
ಹೊಸಪೇಟೆ: ತುಂಗ ಭದ್ರಾ ಜಲಾಶಯ ಮಂಡಳಿ ಕಾರ್ಯದರ್ಶಿಗಳ ನಿವಾಸದ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು, ಬೆಲೆಬಾಳುವ ಶ್ರೀಗಂಧದ ಮರಗಳನ್ನು ಹೊತ್ತೊಯ್ದಿರುವ ಘಟನೆ ಶನಿವಾರ ನಡೆದಿದೆ.
ಈ ಸಂಬಂಧ ತುಂಗ ಭದ್ರಾ ಜಲಾಶಯ ಮಂಡಳಿ ಕಾರ್ಯದರ್ಶಿಯವರ ಮನೆಯ ಭದ್ರತಾ ಸಿಬ್ಬಂದಿ ದೂರು ಸಲ್ಲಿಸಿದ್ದು, ದೂರಿನಲ್ಲಿ, 25 ರಿಂದ 30 ವರ್ಷ ವಯಸ್ಸಿನವರಿದ್ದ 8 ರಿಂದ 10 ಜನರ ಗುಂಪು ಬೆಳಗಿನ ಜಾವ 1.40 ರ ಸುಮಾರಿಗೆ ಆವರಣಕ್ಕೆ ಪ್ರವೇಶಿಸಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಯ ಕೈಕಾಲು ಕಟ್ಟಿ, ಬಾಯಿ ಮುಚ್ಚಿ ಮರಗಳ ಕಳ್ಳತನ ಮಾಡಿದೆ.
ಆರೋಪಿಗಳು 100 ಕೆಜಿ ತೂಕದ ಅಂದಾಜು 3 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರವನ್ನು ಕಡಿದು ಕದ್ದೊಯ್ದಿದ್ದಾರೆಂದು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಅಪರಾಧ ಸಂಖ್ಯೆ 47/2025 ರ ಅಡಿಯಲ್ಲಿ ಅರಣ್ಯ ಕಾಯ್ದೆಯ ಸೆಕ್ಷನ್ 310(2) ಮತ್ತು 86 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಸ್ ಜಾಹ್ನವಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ತಾಂತ್ರಿಕ ಪುರಾವೆಗಳನ್ನು ಬಳಸಿಕೊಂಡು ಆರೋಪಿಗಳ ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಗಳು ಮುಂದುವರೆದಿವೆ ಎಂದು ಹೇಳಿದ್ದಾರೆ.
Advertisement