

ಬೆಂಗಳೂರು: 2023 ರ ಚುನಾವಣೆಗೂ ಮುನ್ನ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಅಳಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ತಾಂತ್ರಿಕ ವಿವರ ಕೋರಿ ಗುರುವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
ಫೆಬ್ರವರಿ 2022 ಮತ್ತು ಫೆಬ್ರವರಿ 2023 ರ ನಡುವೆ ಆಳಂದ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು 6,018 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಲು ಬಳಸಲಾಗಿರುವ ಪೋರ್ಟ್‌ಗಳು, ಐಪಿ ವಿಳಾಸಗಳು ಮತ್ತು ಒಟಿಪಿಗಳಂತಹ ವಿವರಗಳನ್ನು ಎಸ್ ಐಟಿ ಕೋರಿದ್ದು, ಉತ್ತರಕ್ಕಾಗಿ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಆಯೋಗದ ವರದಿ ಜೊತೆಗೆ ಗುಪ್ತಚರ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದು, ಡಿಜಿಟಲ್ ಫೋರೆನ್ಸಿಕ್ ಸಾಧನವಾದ ಇಂಟರ್ನೆಟ್ ಪ್ರೋಟೋಕಾಲ್ ವಿವರ ದಾಖಲೆ (ಐಪಿಡಿಆರ್) ವಿವರಗಳನ್ನು ಪಡೆಯುತ್ತಿದೆ ಎಂದು ತಿಳಿದುಬಂದಿದೆ.
ಈ ಮಾಹಿತಿಯಿಂದಾಗಿ ಎಸ್ಐಟಿ ಈಗಾಗಲೇ ಕಲಬುರಗಿಯಲ್ಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ್ದು, ಅಲ್ಲಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ನಾಲ್ವರ ಪೈಕಿ ಓರ್ವನನ್ನು ಮೊಹಮ್ಮದ್ ಅಕ್ರಮ್ ಎಂದು ಗುರ್ತಿಸಲಾಗಿದ್ದು, ಈತ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ.
ಅಕ್ರಮ್, ಅಶ್ಫಾಕ್ ಮತ್ತು ಇತರ ನಾಲ್ವರು ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆಗೆ ಪ್ರತಿ ಅರ್ಜಿಗೆ ತಲಾ 80 ರೂ. ಪಡೆದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಮತದಾರರ ಹೆಸರನ್ನು ಅಳಿಸಲು ಆರೋಪಿಗಳು 75 ಮೊಬೈಲ್ ಫೋನ್ ಗಳು, ಕಡಿಮೆ ಹಾಗೂ ಮಧ್ಯಮ ಆದಾಯದ ಜನರನ್ನು ಬಳಸಿಕೊಳ್ಳಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಗೆ ಹಣ ಪಾವತಿಯಾಗಿರುವ ವಿಧಾನ ಮತ್ತು ಮೂಲವನ್ನು ತಂಡವು ತನಿಖೆ ನಡೆಸಲಾಗುತ್ತಿದ್ದು, ಈ ಹಾದಿಯನ್ನು ಪತ್ತೆಹಚ್ಚುವುದು ಸವಾಲಾಗಿರಬಹುದು ಎಂದು ಮೂಲಗಳು ತಿಳಿಸಿವೆ.
Advertisement