

ಬೆಂಗಳೂರು: ಕಲಬುರಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ಕುರಿತು ಜಟಾಪಟಿ ಜೋರಾಗಿದೆ. ಆರ್‌ಎಸ್‌ಎಸ್ ಪಥಸಂಚನಕ್ಕೆ ಪ್ರತಿಯಾಗಿ ಜೈ ಭೀಮ್ ಸಂಘಟನೆಯೂ ಪಥಸಂಚಲನಕ್ಕೆ ಮುಂದಾಗಿದ್ದು, ಸಂಘಟನೆಯು ಪೊಲೀಸರ ಅನುಮತಿ ಕೋರಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೀಮ್ ಆರ್ಮಿ ರಾಜ್ಯ ಅಧ್ಯಕ್ಷ ರಾಜಗೋಪಾಲ್ ಡಿಎಸ್ ಅವರು, ಪಥಸಂಚನದ ವೇಳೆ ನಿರ್ದಿಷ್ಟಪಡಿಸಿದ ಐದು ವಸ್ತುಗಳಲ್ಲಿ ಯಾವುದಾದರೂ ಮೂರು ವಸ್ತುಗಳನ್ನು - ಸಂವಿಧಾನದ ಪೀಠಿಕೆಯ ಪ್ರತಿ, ನೀಲಿ ಶಾಲು ಮತ್ತು ಬಿದಿರಿನ ಕೋಲುಗಳು, ಉಕ್ಕಿನ ಬಳೆ ಅಥವಾ ಪರವಾನಗಿ ಪಡೆದ ಬಂದೂಕುಗಳನ್ನು - ಕೊಂಡೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದೇವೆಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ದಲಿತ ಸಚಿವರನ್ನು ಬೆದರಿಸಲು ಪ್ರಯತ್ನಿಸುತ್ತಿರುವುದರಿಂದ ನಾವು ಅನುಮತಿ ಕೋರಿದ್ದೇವೆ. ಸಾಮಾಜಿಕ ಸಮಾನತೆಯನ್ನು ಬೆಂಬಲಿಸುವ ಬದಲು, ಆರ್‌ಎಸ್‌ಎಸ್ ಭಯ ಮತ್ತು ವಿಭಜನೆಯನ್ನು ಸೃಷ್ಟಿಸುತ್ತಿದೆ. 100 ವರ್ಷಗಳ ಅಸ್ತಿತ್ವದ ನಂತರವೂ, ಸಂಘಟನೆಯು ಯುವಕರಲ್ಲಿ ಜ್ಞಾನ ಅಥವಾ ಶಿಕ್ಷಣವನ್ನು ಹರಡುವಲ್ಲಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ತನ್ನ ಪಥಸಂಚಲನ ಅಥವಾ ಸಭೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನವನ್ನು ಒಮ್ಮೆಯೂ ಓದಿಲ್ಲ ಅಥವಾ ಗೌರವಿಸಿಲ್ಲ. ಕೋಲುಗಳನ್ನು ಹಿಡಿದುಕೊಳ್ಳಲು ಸಾಧ್ಯವಾದರೆ, ನಾವು ಸಂವಿಧಾನವನ್ನು ಹೊತ್ತುಕೊಂಡು ಶಿಸ್ತುಬದ್ಧ, ಸಾಂವಿಧಾನಿಕ ರೀತಿಯಲ್ಲಿ ಶಾಂತಿಯುತವಾಗಿ ನಡೆಯುತ್ತೇವೆ. ಅವರಿಗೆ ಅನುಮತಿ ನೀಡಿದರೆ, ನಮಗೂ ಅವಕಾಶ ನೀಡಬೇಕು. ನಮಗೆ ಅನುಮತಿ ಸಿಕಿದ್ದೇ ಆದರೆ, ಭೀಮ್ ಆರ್ಮಿ ಪ್ರತಿ ಜಿಲ್ಲೆಯಿಂದ ಕನಿಷ್ಠ 1,000 ಜನರನ್ನು ಸಜ್ಜುಗೊಳಿಸುತ್ತದೆ, ರ್ಯಾಲಿಯಲ್ಲಿ 25,000 ಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ ಎಂದು ಹೇಳಿದರು.
Advertisement