

ಬೆಂಗಳೂರು: ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ಬಳಿಯ ಎಂಎಂ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದಾಗ ಬೈಕ್‌ಗೆ ಡಿಕ್ಕಿ ಹೊಡೆದ ಆರೋಪದ ಮೇಲೆ ಕನ್ನಡದ ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಟಿ ದಿವ್ಯಾ ಸುರೇಶ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಅವರನ್ನು ವಿಚಾರಣೆ ನಡೆಸಿದ್ದಾರೆ.
ಅಕ್ಟೋಬರ್ 4 ರಂದು ಬೆಳಗಿನ ಜಾವ 1.30 ರ ಸುಮಾರಿಗೆ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ಜಯಮ್ಮ ಟೀ ಸ್ಟಾಲ್ ಬಳಿ ಈ ಘಟನೆ ನಡೆದಿದೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕೆಳಗೆ ಬಿದ್ದಿದ್ದು, ಈ ಪೈಕಿ ಓರ್ವರ ಮೊಣಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಪರಿಣಾಮ ಮಹಿಳೆ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ದೀಪಾಂಜಲಿ ನಗರದ ನಿವಾಸಿ ಜಿ ಕಿರಣ್ (25) ನೀಡಿದ ದೂರಿನ ಮೇರೆಗೆ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ನಟಿಯನ್ನು ಪತ್ತೆಹಚ್ಚಿದ್ದಾರೆ.
ಕಿರಣ್ ಮತ್ತು ಅವರ ಸೋದರಸಂಬಂಧಿಗಳಾದ ಅನಿತಾ ಮತ್ತು ಅನುಷಾ ಆಸ್ಪತ್ರೆಗೆ ಹೋಗುತ್ತಿದ್ದಾಗ ಬೀದಿ ನಾಯಿಗಳು ಅವರ ಬೈಕನ್ನು ಬೆನ್ನಟ್ಟಲು ಪ್ರಾರಂಭಿಸಿದವು, ಈ ವೇಳೆ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಮಹಿಳೆಯೊಬ್ಬರು ಓಡಿಸುತ್ತಿದ್ದ ಕಪ್ಪು ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದರೂ ಮಹಿಳೆ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ಬೆನ್ನಲ್ಲೇ ಕಾರನ್ನು ಪತ್ತೆ ಮಾಡಿರುವ ಪೊಲೀಸರು, ಬುಧವಾರ ದಿವ್ಯಾ ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
Advertisement